ಉಡುಪಿ

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೇರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದರು.‌

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೇರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದರು.‌

ಬಳಿಕ ಸಂದೇಶ ನೀಡಿದ ಅವರು, ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ, ಸಂವಿಧಾನದ ಅಡಿಯಲ್ಲಿ ಸರ್ವಧರ್ಮಗಳನ್ನು ಸಮಾನವಾಗಿ ಕಾಣಬೇಕು. ನಮ್ಮ ಸರ್ಕಾರ ಈ ಮೌಲ್ಯವನ್ನು ಪಾಲಿಸುತ್ತಾ ಬಂದಿದೆ ಎಂದರು.

2024 -25 ನೇ ಆರ್ಥಿಕ ವರ್ಷದಲ್ಲಿ ನಮ್ಮ ರಾಜ್ಯವು ದೇಶದಲ್ಲಿಯೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಠಿಯಿಂದ ವಿತ್ತೀಯ ನಿರ್ವಹಣೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿದೆ. ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಪಂಚಾಯತ್ ವಿಕೇಂದ್ರೀಕರಣ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನ ವರದಿಯನ್ನು ಕೇಂದ್ರದ ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆಗೊಳಿಸಿದ್ದು, ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ನಾವು ಕೈಗಾರಿಕೆ ಮತ್ತು ವ್ಯಾಪಾರವನ್ನು ಪ್ರೋತ್ಸಾಹಿಸಿದಾಗ ಮಾತ್ರ ಹೊಸ ಉದ್ಯೋಗಾವಕಾಶಗಳು ಸೃಷ್ಟಿ ಸಾಧ್ಯ. ಇದಕ್ಕೆ ಪೂರಕವಾಗಿ ಅಗತ್ಯ ಮೂಲಸೌಕರ್ಯ ಸೃಜನೆ, ನೀತಿ ರೂಪಣೆಗಳು, ಹೂಡಿಕೆದಾರರ ಸಮಾವೇಶಗಳನ್ನು ಕೈಗೊಳ್ಳಲಾಗಿದೆ.

ನಮ್ಮ ರಾಜ್ಯವು ವಿಜ್ಞಾನ, ತಂತ್ರಜ್ಞಾನ ಸಂಶೋಧನೆ, ಐಟಿ-ಬಿಟಿ, ನವೋದ್ಯಮಗಳಲ್ಲಿ ಹೊಂದಿದ ಮುಂಚೂಣಿಯನ್ನು ಮತ್ತಷ್ಟು ವ್ಯಾಪಕವಾಗಿ ವಿಸ್ತರಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ದೇಶವು ಅನುಸರಿಸುವಂತಹ ಹತ್ತು ಹಲವು ಉದ್ಯಮ ಸ್ನೇಹಿ ಯೋಜನೆಗಳನ್ನು ನಾವು ಜಾರಿಗೊಳಿಸಿದ್ದೇವೆ.

ರಾಜ್ಯದಲ್ಲಿ ನಕ್ಸಲಿಸಂನಂತಹ ಸವಾಲನ್ನು ಹತ್ತಿಕ್ಕಲು ಅಗತ್ಯವಿರುವ ಎಲ್ಲಾ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿ, ಗೆಲುವಿನ ಪ್ರಯತ್ನ ಮಾಡಿದ್ದಾರೆ. ಆಟಗಾರರ ಸಮರ್ಪಣೆ ಹಾಗೂ ಕಠಿಣ ಪರಿಶ್ರಮವನ್ನು ನಾನು ಪ್ರಶಂಸಿಸುತ್ತೇನೆ.

ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಲು ಅನುಕೂಲವಾಗುವಂತೆ ಮನೆ ಮನೆಗೆ ಪೊಲೀಸ್ ಸೇವೆ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 100 ಹೈಟೆಕ್ ಸಂಚಾರಿ ಆರೋಗ್ಯ ಘಟಕಗಳನ್ನು ಒಟ್ಟು 129 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇವೆಯನ್ನು ಒದಗಿಸಿದೆ. ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಲು ಸರ್ಕಾರವು ಹೈಟೆಕ್ ಸಂಚಾರಿ ಆರೋಗ್ಯ ಘಟಕವನ್ನು ಲೋಕಾರ್ಪಣೆಗೊಳಿಸಿದೆ.

ಎಲ್ಲಾ ಮಾಸಿಕ ಪಿಂಚಣಿ ಯೋಜನೆಗಳನ್ನು ಡಿಬಿಟಿ ವ್ಯಾಪ್ತಿಗೆ ತರುವುದರೊಂದಿಗೆ ಪ್ರತಿ ಮಾಹೆ ರಾಜ್ಯದಲ್ಲಿ ಅಂದಾಜು 82.57 ಲಕ್ಷ ಫಲಾನುಭವಿಗಳಿಗೆ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆ ಯೋಜನೆಯಡಿ ನೇರವಾಗಿ ಜಮೆ ಮಾಡಲಾಗುತ್ತಿದೆ.

ನೈಸರ್ಗಿಕ ವಿಕೋಪಗಳಿಂದ ತತ್ತರಿಸಿದ ರೈತರಿಗೆ ಕ್ಷಿಪ್ರ, ಪಾರದರ್ಶಕ ಹಾಗೂ ನಿಖರವಾದ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಪರಿಹಾರ ತಂತ್ರಾಂಶವನ್ನು ಉನ್ನತೀಕರಿಸಿ, ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ಜಮಾ ಮಾಡಲಾಗುತ್ತಿದೆ.

ದರ್ಖಾಸು ಸಮಿತಿ ವತಿಯಿಂದ ಸಾವಿರಾರು ರೈತರಿಗೆ ನನ್ನ ಭೂಮಿ ದರ್ಖಾಸು ಪೋಡಿ ಅಭಿಯಾನದಡಿ ಉಚಿತವಾಗಿ ಪೋಡಿ ಮಾಡಿಕೊಡಲಾಗುತ್ತಿದೆ.

ಕರ್ನಾಟಕ ಭೂದಾಖಲೆಗಳು ದಶಕಗಳಿಂದ ಕಗ್ಗಂಟಿನಲ್ಲಿದ್ದು, ಜನರು ತಾಲೂಕು ಕಚೇರಿಗೆ ಅಲೆಯಬೇಕಿತ್ತು. ಇದಕ್ಕೆ ಪರಿಹಾರವಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರೊಂದಿಗೆ ಸುರಕ್ಷಿತಗೊಳಿಸಲಾಗುತ್ತಿದೆ.

ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮುಂದುವರೆಸಿಕೊಂಡು ಹೋಗುತ್ತಿರುವ ನಮ್ಮ ಸರ್ಕಾರದ ಕಾರ್ಯವೈಖರಿಗೆ ದೇಶ-ವಿದೇಶಗಳ ತಜ್ಞರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಜನರ ಕಷ್ಟ ಕಾರ್ಪಣ್ಯಗಳು ತಗ್ಗಿ ಘನತೆಯ ಜೀವನದ ಬದುಕು ಕಟ್ಟಿಕೊಳ್ಳಲು ರಕ್ಷಣೆಗಳಾಗಿವೆ. ಪ್ರತಿಯೊಬ್ಬ ನಾಗರಿಕನೂ ಸಮಾಜದಲ್ಲಿ ಆತ್ಮ ಗೌರವದಿಂದ ಬಾಳಲು ತನ್ನ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಯಾರ ಮುಂದೆಯೂ ದೈನ್ಯನಾಗದೆ ಬದುಕು ಒದಗಿಸಿರುವ ಆಸರೆಗಳಾಗಿವೆ.
ಬಡತನ ನಿವಾರಣೆಗೆ ನೇರ ನಗದು ನೀಡುವ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ 1.23 ಕೋಟಿ ಫಲಾನುಭವಿಗಳಿಗೆ ಈವರೆಗೆ 47,400 ಕೋಟಿ ರೂ. ಗಳಷ್ಟು ಜಮಾ ಮಾಡಲಾಗಿದೆ. ಜಿಲ್ಲೆಯಲ್ಲಿ 2,25,131 ಫಲಾನುಭವಿಗಳಿಗೆ 870.83 ಕೋಟಿಯಷ್ಟು ಹಣ ಸಂದಾಯ ಮಾಡಲಾಗಿದೆ.

ಅಕ್ಕ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸುವುದರೊಂದಿಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಸದಸ್ಯರನ್ನಾಗಿಸಲಾಗುತ್ತಿದೆ.

ಇಂದಿರಾ ಕ್ಯಾಂಟೀನ್ ಮತ್ತು ಜಿಲ್ಲಾ ಹಾಗೂ ತಾಲೂಕು ಕಚೇರಿಯ ಆವರಣದಲ್ಲಿ ಅಕ್ಕ ಕೆಫೆ ನಿರ್ವಹಣೆಯನ್ನು ಸ್ವ-ಸಹಾಯ ಸಂಘಗಳ ಮೂಲಕ ಮಾಡಲು ಪ್ರಾಯೋಗಿಕವಾಗಿ 10 ನಗರಗಳಲ್ಲಿ ಚಾಲನೆ ನೀಡಲಾಗಿದೆ.
ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಇತ್ಯಾದಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದೆ.

ಜನರು ಪ್ರತಿನಿತ್ಯ ಆನ್‌ಲೈನ್ ಹಣಕಾಸು ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ದೂರು ದಾಖಲಿಸಲು ಅನುವಾಗುವಂತೆ ಸೈಬರ್ ಅಪರಾಧ ಸಹಾಯವಾಣಿ- 1930 ಹಾಗೂ ವೆಬ್‌ಚಾಟ್ ಅನ್ನು ಉನ್ನತೀಕರಿಸಲಾಗಿದೆ.
ಹೃದಯಾಘಾತ ತಡೆಯಲು ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಪುನೀತ್ ರಾಜ್ ‌ಕುಮಾರ್ ಹೃದಯಜ್ಯೋತಿ ಯೋಜನೆ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ.

ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.
ಅಂಗನವಾಡಿಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ನಡೆಸಲು 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 4 ರಿಂದ 5 ಸಾವಿರ ಅಂಗನವಾಡಿಗಳಲ್ಲಿ ಸದ್ಯದಲ್ಲಿಯೇ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕೇಂದ್ರಗಳಿಗೆ ವಿಸ್ತರಿಸಲಾಗುವುದು.

ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ಜಿಲ್ಲೆಯಲ್ಲಿ 151 ಕೋಟಿ ವೆಚ್ಚದಲ್ಲಿ ಉಪ್ಪು ನೀರು ತಡೆ ಆಣೆಕಟ್ಟು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ ಸುಮಾರು 192.52 ಹೆಕ್ಟೇರ್ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹಕ್ಕಾಗಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ.

ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪರಿಶೀಲನಾ ಹಂತದಲ್ಲಿದೆ.

ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 30 ರಷ್ಟು ಹೆಚ್ಚುವರಿ ಮಳೆಯಿಂದಾಗಿ ಮಾನವ ಜೀವ ಹಾನಿ, ವಾಸ್ತವ್ಯ ಮನೆ ಹಾನಿ ಮತ್ತಿತರ ಹಾನಿಗಳಾಗಿ ಈವರೆಗೆ 1 ಕೋಟಿ 14 ಲಕ್ಷ ರೂ. ಪರಿಹಾರವನ್ನು ಪಾವತಿಸಲಾಗಿದೆ.
ಪೂರ್ವ ಮುಂಗಾರು ಮಳೆಯಿಂದ 31.63 ಹೆಕ್ಟೇರ್ ಬೆಳೆಹಾನಿಗೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿದೆ. ಭೂ ಕುಸಿತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 30 ಕೋಟಿ ರೂ.ಗಳ ಕಾಮಗಾರಿಗಳನ್ನು ನಡೆಸಲು ಕ್ರಮವಹಿಸಲಾಗಿದೆ.

ಬೈಂದೂರಿನ ಮರವಂತೆಯಲ್ಲಿ ಹೊರಬಂದರು ವಿಸ್ತರಣಾ ಕಾಮಗಾರಿಯನ್ನು 85 ಕೋಟಿ ರೂ. ಗಳಲ್ಲಿ, ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಯನ್ನು 180.84 ಕೋಟಿ ರೂ. ಮೊತ್ತದಲ್ಲಿ, ಹಂಗಾರುಕಟ್ಟೆಯಲ್ಲಿ ಕೋಸ್ಟಲ್ ಬರ್ತ್ ‌ನಿರ್ಮಾಣ ಕಾಮಗಾರಿಯನ್ನು 78.28 ಕೋಟಿ ರೂ. ಮೊತ್ತದಲ್ಲಿ, ಗಂಗೊಳ್ಳಿ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯನ್ನು 95.88 ಕೋಟಿ ರೂ. ಮೊತ್ತದಲ್ಲಿ ಹಾಗೂ ಗಂಗೊಳ್ಳಿ ಫಿಶ್ ಹಾರ್ಬರ್ ಉನ್ನತೀಕರಣ ಕಾಮಗಾರಿಯನ್ನು 22.18 ಕೋಟಿ ರೂ.ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ತೀವ್ರ ಸಮುದ್ರ ಕೊರೆತ ಪ್ರತಿಬಂಧಿಸಲು 4.50 ಕೋಟಿ ರೂ. ಮೊತ್ತದಲ್ಲಿ 10 ತಡೆಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರರ 9,328 ಮೋಟಾರೀಕೃತ ಸಾಂಪ್ರದಾಯಿಕ ನಾಡದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತಿ ದೋಣಿಗಳಿಗೆ ಕಳೆದ ಸಾಲಿನಲ್ಲಿ 91,954 ಕಿಲೋ ಲೀಟರ್ ಮಾರಾಟ ಕರ ಡೀಸೆಲ್ ಅನ್ನು ವಿತರಿಸಲಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿರುವ 5,066 ಮೀನುಗಾರರಿಗೆ 636.36 ಕೆ.ಎಲ್ ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 4 ಇಂದಿರಾ ಕ್ಯಾಂಟೀನ್ ‌ಗಳು ಬಡವರ ಹಸಿವನ್ನು ನೀಗಿಸುತ್ತಿದ್ದು, ಬೈಂದೂರು ಪಟ್ಟಣ ಪಂಚಾಯತ್ ಹಾಗೂ ಕಾಪು ಪುರಸಭಾ ವ್ಯಾಪ್ತಿಯಲ್ಲಿ 2 ಹೊಸದಾಗಿ ಇಂದಿರಾ ಕ್ಯಾಂಟೀನ್‌ಳಿಗೆ ಕಳೆದ ಜೂನ್ ಮಾಹೆಯಲ್ಲಿ ಚಾಲನೆ ನೀಡಿದ್ದೇನೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಹುಮುಖ್ಯ ಕ್ಷೇತ್ರವನ್ನಾಗಿ ರೂಪಿಸಲು ವಿಶೇಷ ಮುತುವರ್ಜಿ ವಹಿಸಲಾಗಿದೆ.
ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಶಿವಪುರ, ಕೆರೆಬೆಟ್ಟು, ನಿಟ್ಟೆ, ಉಪ್ಪೂರು, ಸಾಂತೂರು ಹಾಗೂ ಎಲ್ಲೂರು ಗ್ರಾಮಗಳಲ್ಲಿ ಒಟ್ಟು 1207.34 ಎಕ್ರೆ ಜಮೀನನ್ನು ಗುರುತಿಸಲಾಗಿದ್ದು, ಇವು ಪ್ರಗತಿಯ ಹಂತದಲ್ಲಿವೆ.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯಡಿ ಕೊರಗ ಜನಾಂಗದ 105 ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ 4.50 ಲಕ್ಷ ಸಹಾಯಧನದೊಂದಿಗೆ ವಸತಿ ಸೌಲಭ್ಯಗಳನ್ನು ಹಾಗೂ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಪೌಷ್ಠಿಕ ಆಹಾರಗಳನ್ನು ಕಳೆದ ಸಾಲಿನಲ್ಲಿ ವಿತರಿಸಲಾಗಿದೆ.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 1,774, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 4,884, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ 350 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು 7,008 ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಮೊದಲಾದ ಮೂಲಸೌಲಭ್ಯಗಳನ್ನು ನೀಡಲಾಗುತ್ತಿದೆ.

ಒಟ್ಟಾರೆ ಕರ್ನಾಟಕದ ಸರ್ವಾಂಗೀಣ ಹಾದಿಯಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದನ್ನು ಜನತೆಗೆ ತಲುಪಿಸುವ ಹೊಣೆ ಜನಪ್ರತಿನಿಧಿಗಳಾದ ನಮ್ಮ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಇದೆ ಎಂದು ಅವರು ತಿಳಿಸಿದರು.

ಈ ವೇಳೆ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ