ಬೆಳ್ತಂಗಡಿ, ಸೆಪ್ಟೆಂಬರ್ 15, 2025: ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವತಿಯಿಂದ “ವಿಶ್ವ ಪ್ರಜಾಪ್ರಭುತ್ವ ದಿನ” ಅಂಗವಾಗಿ ಬೆಳ್ತಂಗಡಿ ಪಕ್ಷದ ಕಚೇರಿಯಲ್ಲಿ ಸೆಮಿನಾರ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿಯ ಅಧ್ಯಕ್ಷೆ ಶಮಾ ಉಜಿರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಅಸ್ಮಾ ರಿಝ್ವಾನ್ ರಾಜಕೀಯದಲ್ಲಿ ಮಹಿಳೆಯರು ತಮ್ಮ ಪ್ರಾತಿ ನಿಧ್ಯದ ಅಗತ್ಯತೆಯನ್ನು ಮನಗಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಮಹಿಳೆಯರು ಕಾನೂನು ಅರಿವನ್ನು ಪಡೆದುಕೊಂಡು, ಸಬಲೀಕರಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು.
ಮತ್ತೋರ್ವ ಅತಿಥಿ ಡಾ. ಆಶಿಕಾ ಮಾತನಾಡಿ ನಮ್ಮ ನಡವಳಿಕೆಗಳಲ್ಲಿ ಸಹ ಪ್ರಜಾಪ್ರಭುತ್ವದ ಅಂಶಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಮುಖ್ಯವಾಗಿ ಅತ್ಯಂತ ಸರಳವಾದ ಕೆಲವು ಗುಣಗಳನ್ನು ಅನುಸರಿಸ ಬೇಕು. ಜನ, ದೇಶ ಮತ್ತು ಸಂವಿಧಾನ ಅತ್ಯಂತ ಮಹತ್ವದ್ದು. ಅದಕ್ಕೆ ಗೌರವ, ಪ್ರೀತಿ, ಮಾನ್ಯತೆ ಮತ್ತು ಮೊದಲ ಆದ್ಯತೆ ನೀಡಬೇಕೆಂದರು. ಸಂಯಮ, ಸಹಕಾರ, ಪ್ರೀತಿ, ಸಹಬಾಳ್ವೆ ಇವುಗಳು ದಿನನಿತ್ಯದ ಬದುಕಿನ ಚಟುವಟಿಕೆಗಳ ಭಾಗವಾಗಿರುವಂತೆ ನೋಡಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ದಿಕ್ಸೂಚಿ ಭಾಷಣ ಮಾಡಿದ ಪತ್ರಕರ್ತೆ ಫಾತಿಮಾ ಉಸ್ಮಾನ್ ಅವರು ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶ ವಾದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊನೆಗೊಳಿಸಿ ನಿರಂಕುಶವಾದವನ್ನು ಹೇರಲು ಸಂವಿಧಾನ ವಿರೋಧಿಗಳು ಪಣತೊಟ್ಟಿರುವಾಗ ಪ್ರಜಾಪ್ರಭುತ್ವವನ್ನು ಈ ದೇಶದಲ್ಲಿ ಸಂರಕ್ಷಿಸುವ ಅಚಲ ನಿರ್ಧಾರವನ್ನು ನೈಜ ಭಾರತೀಯರಾದ ನಾವು ಕೈಗೊಳ್ಳಬೇಕು. ಈ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ತನ್ನ ಗುರಿಯನ್ನು ಈಡೇರಿಸುವ ಕಠಿಣ ಹೋರಾಟಕ್ಕೆ ನಾವು ಬದ್ಧರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ನಾಯಕಿಯರು, ಕಾರ್ಯಕರ್ತರು ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಮ್ ನಗರ ಸಮಿತಿ ಅಧ್ಯಕ್ಷೆ ರುಬಿಯಾ ಸ್ವಾಗತಿಸಿ, ಸಮಿತಿ ಸದಸ್ಯೆ ರಫಾ ಕಾರ್ಯಕ್ರಮ ನಿರೂಪಿಸಿ, ರಮ್ಲತ್ ಧನ್ಯವಾದಗೈದರು.