ಭಟ್ಕಳ, ಆಗಸ್ಟ್ 24, 2025: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರ್ಚುವಲ್ ನಂಬರ್ ಬಳಸಿ ತರಕಾರಿ ವ್ಯಾಪಾರಿಯೊಬ್ಬರ ಮಗಳ ಖಾಸಗಿ ಫೋಟೋ ಮತ್ತು ವಿಡಿಯೋ ಇದೆ ಎಂದು ಬೆದರಿಸಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟ ಮೂವರು ಸುಲಿಗೆಕೋರರನ್ನು ಭಟ್ಕಳ ಶಹರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಗಸ್ಟ್ 20, 2025ರಂದು ಬೆಳಿಗ್ಗೆ 11:00 ಗಂಟೆಗೆ ದೂರುದಾರರಿಂದ ದೂರು ದಾಖಲಾದಾಗ ಬೆಳಕಿಗೆ ಬಂದಿದೆ.
ದೂರುದಾರರಾದ ತರಕಾರಿ ವ್ಯಾಪಾರಿ ತಮ್ಮ ಅಂಗಡಿಯಲ್ಲಿದ್ದಾಗ ಆಗಸ್ಟ್ 16, 2025ರ ರಾತ್ರಿ 8:35ಕ್ಕೆ +31 970105***** ಎಂಬ ವರ್ಚುವಲ್ ಸಂಖ್ಯೆಯಿಂದ ಕರೆ ಬಂದಿದ್ದು, ಆರೋಪಿಗಳು “ನಿನ್ನ ಮಗಳ ಖಾಸಗಿ ಫೋಟೋ ಮತ್ತು ವಿಡಿಯೋ ನನ್ನ ಬಳಿ ಇದೆ, 20 ಲಕ್ಷ ರೂ. ಕೊಡದಿದ್ದರೆ ಎಲ್ಲರಿಗೂ ಕಳುಹಿಸಿ ಮಾನಹಾನಿ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದರು. ಆಗಸ್ಟ್ 18 ಮತ್ತು 19ರಂದು ದೂರುದಾರರ ಪತ್ನಿಯ ಮೊಬೈಲ್‌ಗೆ +31 97010*****ಮತ್ತು +31 9701052**** ಸಂಖ್ಯೆಗಳಿಂದ ಕರೆ ಮಾಡಿ 15 ಲಕ್ಷ ರೂ.ಗೆ ಬೇಡಿಕೆಯನ್ನು ಒತ್ತಾಯಿಸಿದ್ದರು.
ದೂರಿನ ಆಧಾರದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 97/2025, ಕಲಂ 308(2) ರಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಉಪಾಧೀಕ್ಷಕ ಮಹೇಶ ಎಂ.ಕೆ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್. ಮತ್ತು ಪಿಎಸ್‌ಐ ನವೀನ ಎಸ್. ನಾಯಕ್ ನೇತೃತ್ವದ ವಿಶೇಷ ತಂಡವು ತನಿಖೆ ಆರಂಭಿಸಿ, ಆರೋಪಿಗಳಾದ:
- ಮೊಹಮ್ಮದ್ ಫಾರಿಸ್ (20), ವಾಸ: ಅಬ್ಬುಹುರೇರಾ ಕಾಲೊನಿ, ಭಟ್ಕಳ
- ಮೊಹಮ್ಮದ್ ಅರ್ಶದ್ (22), ವೃತ್ತಿ: ಗುತ್ತಿಗೆ ಕೆಲಸ, ವಾಸ: ಮೂಸಾನಗರ, ಭಟ್ಕಳ
- ಅಮನ್ (20), ವೃತ್ತಿ: ಸಿಎಸ್‌ಇ-ಡಿಎಸ್ ಇಂಜಿನಿಯರಿಂಗ್ ವಿದ್ಯಾರ್ಥಿ, ವಾಸ: ಹಾಲಾಡಿ, ಜನತಾ ಕಾಲೊನಿ, ಲಕ್ಷ್ಮಿನರಸಿಂಹ ದೇವಸ್ಥಾನ ರಸ್ತೆ, ಕುಂದಾಪುರ, ಉಡುಪಿ
ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಉಪಾಧೀಕ್ಷಕ ಮಹೇಶ ಎಂ.ಕೆ., ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್., ಪಿಎಸ್‌ಐ ನವೀನ ಎಸ್. ನಾಯಕ್, ಸಿಬ್ಬಂದಿಗಳಾದ ದಿನೇಶ ನಾಯಕ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ, ಲೊಕೇಶ ಕತ್ತಿ, ಮಹೇಶ ಅಮಗೋತ, ರಾಘವೇಂದ್ರ ಗೌಡ, ಜಗದೀಶ ನಾಯಕ್, ಜಿಲ್ಲಾ ತಾಂತ್ರಿಕ ವಿಭಾಗದ ಬಬನ್ ಮತ್ತು ಉದಯ ಗುನಗಾ ಪಾಲ್ಗೊಂಡಿದ್ದರು. ಈ ಕಾರ್ಯಾಚರಣೆಗೆ ಭಟ್ಕಳ ಶಹರ ಪೊಲೀಸರನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.