ಭಟ್ಕಳ, ಸೆಪ್ಟೆಂಬರ್ 15, 2025: ಭಟ್ಕಳದ ಮುಗ್ದುಂ ಕಾಲೋನಿಯ ತೆರೆದ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ಮೂಳೆಗಳ ರಾಶಿ ಬಿದ್ದಿವೆ ಎಂಬ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡಿದ ಅಜ್ಞಾತರ ವಿರುದ್ಧ ಭಟ್ಕಳ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ವೆಂಕಟೇಶ ನಾವಡಾ ಅವರು ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಸೆಪ್ಟೆಂಬರ್ 9, 2025 ರಂದು ರಾತ್ರಿ ಸುಮಾರು 9:00 ಗಂಟೆಗೆ ಅಜ್ಞಾತ ಆರೋಪಿತರು ಸೋಶಿಯಲ್ ಮೀಡಿಯಾದಲ್ಲಿ ಜಾನುವಾರುಗಳ ಮೂಳೆಗಳ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡು, ಈ ಪ್ರದೇಶದಲ್ಲಿ ಮೂಳೆಗಳ ರಾಶಿ ಇದೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ, ಶಾಂತಿಭಂಗ ಉಂಟುಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಲು ತನಿಖೆಯನ್ನು ಆರಂಭಿಸಿದ್ದಾರೆ.
ಸೋಶಿಯಲ್ ಮೀಡಿಯಾ ವೈರಲ್ ಫೋಟೋಗಳು ಹಳೆಯದು – ಅರಣ್ಯ ಇಲಾಖೆ
ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ಮೂಟೆಗಟ್ಟಲೆ ಮೂಳೆಗಳ ಫೋಟೋ ಮತ್ತು ವೀಡಿಯೊಗಳು 2013-14ರ ಹಳೆಯದ್ದು ಎಂದು ಪೊಲೀಸ್ ಖಚಿತಪಡಿಸಿದ್ದಾರೆ.
ಸಿಪಿಐ ದಿವಾಕರ ಅವರು ಮಾಹಿತಿ ನೀಡಿರುವಂತೆ, “ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಮೂಟೆಗಟ್ಟಲೆ ಮೂಳೆಗಳ ಫೋಟೋ ಹಳೆಯದಾಗಿದ್ದು, ಮಾಹಿತಿ ಬಂದ ಕೂಡಲೇ ಪರಿಶೀಲನೆ ನಡೆಸಲಾಗಿದೆ. ಅಲ್ಲಿಯಾವುದೇ ಮೂಳೆಗಳ ರಾಶಿಯೂ ಕಂಡುಬಂದಿಲ್ಲ. ಕಸ, ತ್ಯಾಜ್ಯಗಳನ್ನು ಬುಧವಾರ ಪುರಸಭಾ ಕಾರ್ಮಿಕರು ತೆರವುಗೊಳಿಸಿದ್ದಾರೆ. ಆದರೆ, ಗುಡ್ಡದ ಸೆರಗಿನ ತೊಟ್ಟಿಯೊಂದರಲ್ಲಿ ಗುರುವಾರ ಕೆಲವು ಹಳೆಯ ಮೂಳೆಗಳು ಪತ್ತೆಯಾಗಿವೆ. ಇದರ ಬಗ್ಗೆ ಅರಣ್ಯ ಇಲಾಖೆಯವರು ದೂರು ನೀಡಿದ್ದಾರೆ. ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ.” ಎಂದಿದ್ದಾರೆ.
ಮುಗ್ದಮ್ ಕಾಲೋನಿಯ ಗುಡ್ಡದ ಮೇಲೆ 2013-14ರಲ್ಲಿ ಮೂಟೆಗಟ್ಟಲೆ ಜಾನುವಾರು ಮೂಳೆಗಳು ಮತ್ತು ತ್ಯಾಜ್ಯಗಳನ್ನು ಎಸೆಯಲಾಗಿತ್ತು. ಇದರಿಂದ ದುರ್ವಾಸನೆ ಹರಡಿ ಸಾರ್ವಜನಿಕ ಆಕ್ರೋಶ ಉಂಟಾಗಿತ್ತು. ಆಗ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಒತ್ತಡ ಹಾಕಲಾಗಿತ್ತು. ಇದೀಗ ಅದೇ ಹಳೆಯ ಫೋಟೋಗಳನ್ನು ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಡಿರುವ ಫೋಟೋಗಳಲ್ಲಿ ಕಾಣಿಸುವಷ್ಟು ದೊಡ್ಡ ಮೂಳೆಗಳ ರಾಶಿ ಭಟ್ಕಳದ ಗುಡ್ಡದಲ್ಲಿ ಇಲ್ಲ. ಎರಡು-ಮೂರು ಸಣ್ಣ ಮೂಟೆಗಳಲ್ಲಿ ತ್ಯಾಜ್ಯಗಳು ಇರುವಂತೆ ಕಂಡುಬಂದಿದೆ ಎಂದು ಹೆಚ್ಚುವರಿ ಎಸ್‌ಪಿಯಾದ ಕೃಷ್ಣಮೂರ್ತಿ ಅವರು ಹೇಳಿದ್ದಾರೆ. ಅರಣ್ಯ ಇಲಾಖೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.