ಭಟ್ಕಳ, ಆಗಸ್ಟ್ 31, 2025: ಭಟ್ಕಳದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಗಳನ್ನು ಒಡೆದು ಹಣ ಕದ್ದಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ದರ್ಶನ್ (ತಂದೆ: ಮಂಜುನಾಥ್ ನಾಯ್ಕ, ಕಾರಗದ್ದೆ, ಭಟ್ಕಳ) ಮತ್ತು ನಾರಾಯಣ (ತಂದೆ: ನಾಗಪ್ಪ ಗುಡಿಹಿತ್ತಲ, ಶಿರಾಲಿ, ಭಟ್ಕಳ) ಎಂದು ಗುರುತಿಸಲಾಗಿದೆ.

ದಿನಾಂಕ 28-08-2025ರ ರಾತ್ರಿ, ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿನ ಹಣವನ್ನು ಕದ್ದುಕೊಂಡು ಹೋಗಿದ್ದರು. ಈ ಘಟನೆಯ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಗೊಂಡ ಭಟ್ಕಳ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಸೇರಿದಂತೆ ₹1,20,030 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ,ಸಬ್ ಇನ್ಸ್ಪೆಕ್ಟರ್ ಆದ ರನ್ನಗೌಡ ಮತ್ತು ಠಾಣೆಯ ಸಿಬ್ಬಂದಿಯವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ಶ್ರೀ ದೀಪನ್ ಎಂ ಏನ್ IPS ರವರು ಅಭಿನಂದಿಸಿರುತ್ತಾರೆ.