ಗಂಗೊಳ್ಳಿ , ಆಗಸ್ಟ್ 22, 2025: ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ವತಿಯಿಂದ ಗುರುವಾರ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೀನುಗಾರರಿಗೆ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮ ನಡೆಯಿತು. ಮೀನುಗಾರರಿಗೆ ಮೋಟಾರ್, ಬಲೆ, ಮತ್ತಿತರ ಸಲಕರಣೆಗಳ ಖರೀದಿಗೆ ಸರಕಾರದ ವಿವಿಧ ಯೋಜನೆಗಳಡಿ ಕೆನರಾ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಕೆನರಾ ಬ್ಯಾಂಕ್ ಉಡುಪಿ ವೃತ್ತ ಕಚೇರಿಯ ಎಜಿಎಂ ಟಿ.ಎ.ಎಸ್. ಪೂರ್ಣಾನಂದ ಮಾತನಾಡಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 50,000 ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು. ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಶಕ್ತಿ ಯೋಜನೆಯಡಿ ಸ್ವ-ಉದ್ಯೋಗಕ್ಕೆ ಆರ್ಥಿಕ ಸಹಾಯವನ್ನು ಬ್ಯಾಂಕ್ ಒದಗಿಸುತ್ತದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಉಡುಪಿ ವೃತ್ತ ಕಚೇರಿಯ ಡಿಜಿಎಂ ಪಬಿತ್ರ ಕುಮಾರದಾಸ್, ಅರ್ಹ ಮೀನುಗಾರರಿಗೆ ಸಾಲ ವಿತರಿಸಿ, ಬ್ಯಾಂಕ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಬ್ರೇಜ್, ಪಿಡಿಒ ಶೋಭಾ, ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಹಿರಿಯ ಪ್ರಬಂಧಕ ವಾಸು ದೇವಾಡಿಗ, ಗುಜ್ಜಾಡಿ ಶಾಖೆಯ ಪ್ರಬಂಧಕಿ ಆರತಿ ಪಾಟೀಲ್, ಮರವಂತೆ ಶಾಖೆಯ ಪ್ರಬಂಧಕ ಅಂಬೇಡ್ಕರ್ ಚೈತನ್ಯ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಬಂಧಕ ಮಂಜುನಾಥ ಆರ್.ಆರ್. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂಜೀವ ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ವಂದನೆ ಸಲ್ಲಿಸಿದರು.