ಬೆಂಗಳೂರು, ಆಗಸ್ಟ್ 23, 2025: ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರನ ಬಂಧನಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾವು ಯಾರ ಪರವೂ ಇಲ್ಲ, ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ಹೇಳುತ್ತಿದ್ದೇವೆ,” ಎಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಬೆಳಿಗ್ಗೆ ತಿಳಿಸಿದರು.
ಪ್ರಕರಣದ ‘ಷಡ್ಯಂತ್ರ’ ಆರೋಪವನ್ನು ತಾವೇ ಮೊದಲು ಪ್ರಸ್ತಾಪಿಸಿದ್ದೀರಿ ಎಂಬ ಪ್ರಶ್ನೆಗೆ, “ಬಿಜೆಪಿಯವರು ಇದುವರೆಗೆ ಏನೂ ಮಾತನಾಡಿರಲಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇದ್ದರು. ನಾನು ಷಡ್ಯಂತ್ರದ ವಿಚಾರವನ್ನು ಎತ್ತಿದ ನಂತರವೇ ಮಾತನಾಡುತ್ತಿದ್ದಾರೆ,” ಎಂದರು. ಧರ್ಮಸ್ಥಳ ಕುಟುಂಬದವರು ಮುಖ್ಯಮಂತ್ರಿಗಳ ಬಳಿ ಬಂದು ಎಸ್.ಐ.ಟಿ ರಚನೆಯನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದ ಅವರು, “ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಸರಕಾರ ಕ್ರಮ ಕೈಗೊಳ್ಳಲಿದೆ,” ಎಂದು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸದನದಲ್ಲಿ ಹಾಗೂ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ ಎಂದರು.
ಅನನ್ಯಾ ಭಟ್ ತಮ್ಮ ಮಗಳಲ್ಲ ಎಂಬ ಸುಜಾತ ಭಟ್‌ರ ಹೇಳಿಕೆಗೆ, “ಗೃಹ ಸಚಿವರು ಈ ವಿಷಯವನ್ನು ನೋಡಿಕೊಳ್ಳುತ್ತಾರೆ,” ಎಂದರು. ಸುರ್ಜೇವಾಲ ಅವರೊಂದಿಗಿನ ಸಭೆ ಕುರಿತು, “ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ಮಾಡಬೇಕು. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಜವಾಬ್ದಾರಿಗಳನ್ನು ಹಂಚಿಕೆ ಮಾಡುತ್ತಿದ್ದೇವೆ,” ಎಂದರು.
ಬಿಹಾರದ ಜನಾಧಿಕಾರ ಯಾತ್ರೆಗೆ ತೆರಳುವ ಬಗ್ಗೆ, “ಕಾಂಗ್ರೆಸ್ ಜನಾಧಿಕಾರ ಯಾತ್ರೆಯನ್ನು ಶಾಸಕರು ನೋಡಿಕೊಳ್ಳಬೇಕು. ಮುಖ್ಯಮಂತ್ರಿಗಳಿಗೂ ಆಹ್ವಾನವಿದ್ದು, ಅವರು ಬೇರೊಂದು ದಿನ ತೆರಳಲಿದ್ದಾರೆ,” ಎಂದು ತಿಳಿಸಿದರು.