ಉಡುಪಿ, ಸೆಪ್ಟೆಂಬರ್ 03, 2025: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಲೈಟ್‌ಹೌಸ್‌ನ ಮುಳುಗು ತಜ್ಞ ಮತ್ತು ಜೀವರಕ್ಷಕ ದಿನೇಶ್ ಖಾರ್ವಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲು ದಲಿತ ಸಂಘರ್ಷ ಸಮಿತಿ (ಜೈ ಭೀಮ್ ನೀಲಿಪಡೆ, ಗಂಗೊಳ್ಳಿ, ಕುಂದಾಪುರ) ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಖಾರ್ವಿ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಸೂಕ್ತ ಗೌರವ ನೀಡಬೇಕೆಂದು ಸಮಿತಿಯು ಕೋರಿದೆ.
ದಿನೇಶ್ ಖಾರ್ವಿ ಅವರು ಕಳೆದ ಹಲವು ವರ್ಷಗಳಿಂದ ಜಾತಿ, ಪಂಥ, ಭೇದವಿಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಮುದ್ರ, ನದಿ, ಜಲಪಾತ, ಬಾವಿ, ಮತ್ತು ಕೆರೆಗಳಿಂದ 200ಕ್ಕೂ ಹೆಚ್ಚು ಮೃತದೇಹಗಳನ್ನು ಮೇಲೆತ್ತಿ ಸಂಬಂಧಿತ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ನೊಂದ ಕುಟುಂಬಗಳಿಗೆ ಸಾಂತ್ವನ ನೀಡುವ ಮಹತ್ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ಅವರ ಈ ಸೇವೆಯು ಸಮಾಜದಲ್ಲಿ ಅಪೂರ್ವ ಮಾದರಿಯಾಗಿದೆ.

ಈ ಸಂಬಂಧ ದಲಿತ ಸಂಘರ್ಷ ಸಮಿತಿಯ ಪ್ರತಿನಿಧಿಗಳು ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಫರೀದ್ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದ್ದಾರೆ. ಖಾರ್ವಿ ಅವರ ಅಮೂಲ್ಯ ಸೇವೆಯನ್ನು ಗೌರವಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.