ಗಂಗೊಳ್ಳಿ: ಅಕ್ರಮ ಜಾನುವಾರ ಕಳ್ಳತನ ನಡೆಸಿ ಮಾಂಸ ಮಾಡಿ ಮಾರಾಟ ಮಾಡುವ ಕೃತ್ಯದಲ್ಲಿ ಭಾಗಿಯಾಗಿದ್ದ ಒಟ್ಟು 13 ಪ್ರಕರಣಗಳಲ್ಲಿ ಬೇಕಾದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆ ತಾಲೂಕಿನ ತೋಡಾರು ಗ್ರಾಮದ ನಿವಾಸಿ ಮೊಹಮ್ಮದ್ ಅನ್ಸಾರ್ (32) ಬಂಧಿತ ಆರೋಪಿ.
ಜುಲೈ 31 ರಂದು ಮುಂಜಾನೆ 1.50 ರ ಸುಮಾರಿಗೆ ಮೇಲ್ ಗಂಗೊಳ್ಳಿ ಸಮೀಪ ಬಿಳಿ ಬಣ್ಣದ ಕಾರನ್ನು ತ್ರಾಸಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು, ಇಬ್ಬರು ದನಗಳ್ಳರು ಮೇಲ್ ಗಂಗೊಳ್ಳಿಯ ಬಾಂಬೆ ಬಜಾರ್ ಎದುರು ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಡಿದು ಕಾರಿನ ಹಿಂಬದಿ ಢಿಕ್ಕಿಗೆ ತುಂಬಿಸಿಕೊಂಡು ತ್ರಾಸಿ ಕಡೆಗೆ ಹೋಗುವದನ್ನು ಚಂದ್ರ ಎನ್ನುವವರು ಗಮನಿಸಿ ಹಿಂಬಾಲಿಸಿದ್ದಾರೆ. ಆಗ ಕಾರು ಮುಳ್ಳಿಕಟ್ಟೆಯ ಕಡೆಗೆ ಪರಾರಿಯಾದ ಹಿನ್ನಲೆಯಲ್ಲಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ಪತ್ತೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಮೊಹಮ್ಮದ್ ಅನ್ಸಾರ್ ಎಂಬಾತನನ್ನು ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಮೇತ ವಶಕ್ಕೆ ಪಡೆದು ಅಗಸ್ಟ್ 07ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿತನ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟೂ 13 ಪ್ರಕರಣಗಳು ದಾಖಲಾಗಿರುತ್ತದೆ.
ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್ ಪೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ಪವನ್ ನಾಯಕ್ (ಕಾ & ಸು), ಬಸವರಾಜ ಕನಶೆಟ್ಟಿ (ತನಿಖೆ), ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್, ಶಾಂತರಾಮ ಶೆಟ್ಟಿ, ಸುರೇಶ್, ಸಚಿನ್ ಶೆಟ್ಟಿ , ರಾಜು ಹಾಗೂ ಸಂದೀಪ ಕುರಣಿ, ಪ್ರಸನ್ನ, ರಾಘವೇಂದ್ರ ಪೂಜಾರಿ,ಮಾಳಪ್ಪ ದೇಸಾಯಿ, ಚಿದಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ – ಐಪಿಎಸ್ ಅವರು ಅಭಿನಂದಿಸಿರುತ್ತಾರೆ.