ಹೊನ್ನಾವರ, ಸೆಪ್ಟೆಂಬರ್ 18, 2025: ಹೊನ್ನಾವರದ ಸಂಶಿ ಗ್ರಾಮದಲ್ಲಿ ಬೈಕ್ ಓವರ್‌ಟೇಕ್‌ಗೆ ಸಂಬಂಧಿಸಿದ ಗಲಾಟೆಯಲ್ಲಿ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಅದ್ನಾನ್ (26, ಮುಸ್ಲಿಂಕೇರಿ) ಮತ್ತು ಪ್ರದೀಪ್ ಅಂಬಿಗ (26, ಮಾವಿನಹೊಳೆ) ಅವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಸೆಪ್ಟೆಂಬರ್ 18ರಂದು ಮಧ್ಯಾಹ್ನ ಸುಮಾರು 1:45ರ ಸಮಯದಲ್ಲಿ, ಸಂಶಿ ಗ್ರಾಮದ ವಿವೇಕ್ ಸುರೇಶ್ ನಾಯ್ಕ್ ಮತ್ತು ಸುದೀಪ್ ನಾಯ್ಕ್ ಅವರು ತಮ್ಮ ಬೈಕ್‌ನಲ್ಲಿ ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ಬರುತ್ತಿದ್ದರು. ಮಾವಿನಹೊಳೆ ಬಸ್ ನಿಲ್ದಾಣದ ಬಳಿ, ವಿವೇಕ್ ನಾಯ್ಕ್ ಅವರು ಮುಂದೆ ಹೋಗುತ್ತಿದ್ದ ಮತ್ತೊಂದು ಬೈಕ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ, ಆ ಬೈಕ್‌ನಲ್ಲಿದ್ದ ಆರೋಪಿಗಳು ಅಸಭ್ಯವಾಗಿ ಕೈ ಸೈನ್ ಮಾಡಿದ್ದು, ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು. ಇದರಲ್ಲಿ ಮೊಹಮ್ಮದ್ ಅದ್ನಾನ್ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ವಿವೇಕ್ ನಾಯ್ಕ್ ಅವರಿಗೆ ಚುಚ್ಚಲು ಯತ್ನಿಸಿ, ಅವರಿಗೆ ಗಾಯಗಳಾಗಿವೆ. ಕೂಡಲೇ ವಿವೇಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.
ಈ ಘಟನೆಯ ಬಗ್ಗೆ ಹೊನ್ನಾವರ ಪೊಲೀಸ್ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕಾನೂನು ಕ್ರಮ ತೀವ್ರಗೊಳಿಸಲಾಗುತ್ತಿದೆ. ಈ ಘಟನೆಯು ಕೋಮು ಅಥವಾ ಹಳೆಯ ದ್ವೇಷದಿಂದ ಸಂಭವಿಸಿಲ್ಲ, ಹಠಾತ್ ಪ್ರಚೋದನೆಯಿಂದ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಕೆಲವರು ಈ ಘಟನೆಯ ಬಗ್ಗೆ ಸುಳ್ಳು ಸುದ್ದಿ ಮತ್ತು ಅಪಪ್ರಚಾರ ಹರಡುತ್ತಿರುವುದು ಕಂಡುಬಂದಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.