ಜೋಯಿಡಾ: ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯದ ಡೇರಿಯಾ ಗ್ರಾಮದ ಸಮೀಪ ಖುಂಬಯೇ ಮಜಿರೆಯಲ್ಲಿ ದನ ಮೇಯಿಸುತ್ತಿದ್ದ ರೈತನೋರ್ವರ ಮೇಲೆ ಸೋಮವಾರ ಬೆಳಿಗ್ಗೆ ಕರಡಿಗಳ ಗುಂಪು ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ಈ ದಾಳಿಯಿಂದ ರೈತ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ.
ಕರಡಿ ದಾಳಿಗೊಳಗಾದ ವ್ಯಕ್ತಿಯನ್ನು ಖುಂಬಯೇ ಗ್ರಾಮದ ಶಾಂತಾ ಹನುಮಂತ ಡೇರೆಕರ ಎಂದು ಗುರುತಿಸಲಾಗಿದೆ. ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿವೆ. ಈ ದಾಳಿಯಿಂದಾಗಿ ಶಾಂತಾ ಅವರ ಮುಖ, ತಲೆ ಮತ್ತು ಬೆನ್ನಿಗೆ ತೀವ್ರವಾದ ಗಾಯಗಳಾಗಿದೆ.
ಕೂಡಲೇ ಅವರನ್ನು ಜೊಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲಿಸಲಾಯಿತು.ಗಾಯದ ತೀವ್ರತೆಯ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರದೇಶವು ಕುಂಬಾರವಾಡ ವನ್ಯಜೀವಿ ವಲಯ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿದ್ದು, ಇಲ್ಲಿ ಕರಡಿಗಳ ಸಂತತಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ದಾಂಡೇಲಿ, ಜೋಯಿಡಾ,ಕುಂಬಾರವಾಡ, ಅವೇಡಾ ಮತ್ತು ಡೇರಿಯಾ ಭಾಗಗಳಲ್ಲಿ ಕರಡಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸ್ಥಳೀಯ ರೈತರು ಮತ್ತು ಜನರು ಭಯಭೀತರಾಗಿದ್ದಾರೆ. ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.