ಬೆಂಗಳೂರು, ಆಗಸ್ಟ್ 28, 2025: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಜನಪ್ರಾತಿನಿಧ್ಯ ಕಾಯ್ದೆ, 1951ರ ಸೆಕ್ಷನ್ 29ಎಯಡಿ ನೋಂದಾಯಿತವಾದ ಆದರೆ ಗುರುತಿಸಲ್ಪಡದ 10 ರಾಜಕೀಯ ಪಕ್ಷಗಳಿಗೆ (RUPPs) ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. ಈ ಪಕ್ಷಗಳು ಕಳೆದ ಆರು ವರ್ಷಗಳಿಂದ (2019ರಿಂದ) ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಹಾಗೂ ಅವುಗಳ ವಿಳಾಸವು ಆಯೋಗದ ಬಳಿ ನವೀಕರಣಗೊಂಡಿಲ್ಲ ಎಂದು ತಿಳಿಸಲಾಗಿದೆ.
ನೋಟಿಸ್ ಪ್ರಕಾರ, ಈ ಪಕ್ಷಗಳು ಜನಪ್ರಾತಿನಿಧ್ಯ ಕಾಯ್ದೆ, 1951ರ ಉದ್ದೇಶಕ್ಕೆ ತಕ್ಕಂತೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಯೋಗ ಗಮನಿಸಿದೆ. ಈ ಕಾರಣದಿಂದ, ಭಾರತದ ಸಂವಿಧಾನದ 324ನೇ ವಿಧಿಯಡಿ ಮತ್ತು ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಎಯ ಅಧಿಕಾರವನ್ನು ಬಳಸಿಕೊಂಡು, ಈ ಪಕ್ಷಗಳನ್ನು ನೋಂದಾಯಿತ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲು ಆಯೋಗ ಪ್ರಸ್ತಾಪಿಸಿದೆ.
ಈ ಕ್ರಮಕ್ಕೆ ಮುನ್ನ ಆಯೋಗವು ಪಕ್ಷಗಳಿಗೆ ಸೆಪ್ಟೆಂಬರ್ 1, 2025ರೊಳಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ಅವಕಾಶ ನೀಡಿದೆ. ಪಕ್ಷದ ಅಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿಯಿಂದ ದೃಢೀಕೃತ ದಾಖಲೆಗಳೊಂದಿಗೆ ವಿವರಣೆಯನ್ನು ಸಲ್ಲಿಸಬೇಕು. ಸೆಪ್ಟೆಂಬರ್ 1, 2025ರಂದು ವಿಚಾರಣೆಗೆ ಹಾಜರಾಗಲು ಪಕ್ಷದ ಅಧ್ಯಕ್ಷ/ಪ್ರಧಾನ ಕಾರ್ಯದರ್ಶಿ/ನಾಯಕರಿಗೆ ಸೂಚಿಸಲಾಗಿದೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ಆಯೋಗವು ಮುಂದಿನ ಸೂಚನೆ ಇಲ್ಲದೆ ತಕ್ಕ ಆದೇಶವನ್ನು ಹೊರಡಿಸಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ (ಐಎಎಸ್) ತಿಳಿಸಿದ್ದಾರೆ.
ನೋಟಿಸ್ ಪಡೆದ ಪಕ್ಷಗಳು:
- ಅಖಿಲ ಭಾರತೀಯ ರೈತ ಪಾರ್ಟಿ, ಶ್ರವಣಬೆಳಗೊಳ, ಹಾಸನ
- ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಾರ್ಟಿ, ಬಳ್ಳಾರಿ
- ಭಾರತೀಯ ಜನಶಕ್ತಿ ಕಾಂಗ್ರೆಸ್, ಉಚಿಲ, ಉಡುಪಿ
- ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್, ಧಾರವಾಡ
- ಡಾ. ಅಂಬೇಡ್ಕರ್ ಸಮಾಜವಾದಿ ಡೆಮಾಕ್ರಟಿಕ್ ಪಾರ್ಟಿ, ಚಾಮರಾಜನಗರ
- ಜನ ಸಾಮಾನ್ಯರ ಪಾರ್ಟಿ (ಕರ್ನಾಟಕ), ತುಮಕೂರು
- ಮಾನವ ಪಾರ್ಟಿ, ಹುಬ್ಬಳ್ಳಿ
- ಪ್ರಜಾ ಪರಿವರ್ತನ ಪಾರ್ಟಿ, ಅನೇಕಲ್, ಬೆಂಗಳೂರು
- ಶುಭ ಕರ್ನಾಟಕ, ಗಜೇಂದ್ರಗಡ, ಗದಗ
- ಯಂಗ್ ಇಂಡಿಯಾ ಟಾಂಗ್ರೆಸ್ ಪಾರ್ಟಿ, ಭಾಲ್ಕಿ, ಬೀದರ