ಕಾರವಾರ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ಸಹಕಾರಿಗಳಿಗೆ 3 ವರ್ಷ ಶಿಕ್ಷೆ

ಕಾರವಾರ, ಸೆಪ್ಟೆಂಬರ್ 01, 2025: ಮುಂಡಗೋಡದ ಮೆಹಬೂಬ ಅಲಿಯ ಕೊಲೆ ಪ್ರಕರಣದಲ್ಲಿ ಇಬ್ರಾಹಿಂಗೆ ಜೀವಾವಧಿ ಶಿಕ್ಷೆ, 10,000 ರೂ. ದಂಡ; ಷರೀಪ್ ಮತ್ತು ನಾಜೀಯಾಗೆ 3 ವರ್ಷ ಶಿಕ್ಷೆ, 3,000 ರೂ. ದಂಡ; ಬೇಬಿ ಆಯಿಶಾಗೆ 25,000 ರೂ. ಪರಿಹಾರ. ಶಿರಸಿ ನ್ಯಾಯಾಲಯದ ತೀರ್ಪು.

ಕಾರವಾರ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ಸಹಕಾರಿಗಳಿಗೆ 3 ವರ್ಷ ಶಿಕ್ಷೆ

ಕಾರವಾರ, ಸೆಪ್ಟೆಂಬರ್ 01, 2025: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ 2021ರಲ್ಲಿ ನಡೆದ ಮೆಹಬೂಬ ಅಲಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಾರವಾರ (ಶಿರಸಿ ಪೀಠ) ನ್ಯಾಯಾಧೀಶ ಶ್ರೀ ಕೀರಣ ಕೇಣಿ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಮುಖ ಆರೋಪಿ ಇಬ್ರಾಹಿಂಗೆ ಜೀವಾವಧಿ ಶಿಕ್ಷೆಯೊಂದಿಗೆ 10,000 ರೂ. ದಂಡ, ಕೊಲೆಗೆ ಸಹಕರಿಸಿದ ಷರೀಪ್ ಮತ್ತು ನಾಜೀಯಾಗೆ ತಲಾ 3 ವರ್ಷ ಶಿಕ್ಷೆಯೊಂದಿಗೆ 3,000 ರೂ. ದಂಡ, ಮತ್ತು ಕೊಲೆಯಾದ ಮೆಹಬೂಬ ಅಲಿಯ ಪತ್ನಿ ಬಿಬಿ ಆಯಿಶಾಗೆ 25,000 ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

ಘಟನೆಯ ವಿವರ

ದಿನಾಂಕ 31/12/2021ರಂದು ಶ್ರೀ ಇಸ್ಮಾಯಿಲ್ (34, ಕಿರಾಣಿ ವ್ಯಾಪಾರಿ, ಹಳ್ಳೂರು ಓಣಿ, ಮುಂಡಗೋಡ) ಅವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ಆರೋಪಿಗಳು ದ್ವೇಷದಿಂದ ಇಸ್ಮಾಯಿಲ್‌ರ ಅಣ್ಣ ಮೆಹಬೂಬ ಅಲಿ (51, ವ್ಯಾಪಾರಿ, ಇಂದಿರಾನಗರ, ಮುಂಡಗೋಡ) ಅವರನ್ನು 30/12/2021 ರಾತ್ರಿ 9:00 ಗಂಟೆಯಿಂದ 31/12/2021 ಮಧ್ಯಾಹ್ನ 2:00 ಗಂಟೆಯ ನಡುವೆ ಹರಿತವಾದ ವಸ್ತುವಿನಿಂದ ತಲೆ ಮತ್ತು ಹಣೆಗೆ ಹೊಡೆದು ಕೊಲೆ ಮಾಡಿದ್ದರು. ಮೃತದೇಹವನ್ನು ಕಲ್ಲಳ್ಳಿ-ಹನಮಾಪೂರ ಗ್ರಾಮಗಳ ನಡುವಿನ ಕಲ್ಲಳ್ಳಿ ಹಳ್ಳದಲ್ಲಿ ಮೋಟಾರ್‌ಸೈಕಲ್ ಸಮೇತ ಎಸೆದಿದ್ದರು. ಈ ದೂರಿನ ಆಧಾರದ ಮೇಲೆ ಮುಂಡಗೋಡ ಪೊಲೀಸ್ ಠಾಣೆಯ ಪಿಐ ಶ್ರೀ ಸಿದ್ದಪ್ಪ ಎಸ್. ಸಿಮಾನಿ ಅವರು ಗುನ್ನಾ ಸಂಖ್ಯೆ 170/2021ರಡಿ ಐಪಿಸಿ ಕಲಂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಮತ್ತು ಶಿಕ್ಷೆ

ಪಿಐ ಸಿದ್ದಪ್ಪ ಎಸ್. ಸಿಮಾನಿ ಅವರು ತನಿಖೆ ನಡೆಸಿ, ಆರೋಪಿಗಳಾದ ಇಬ್ರಾಹಿಂ (32, ಕ್ರೇನ್ ಆಪರೇಟರ್, ಸಾಲಕ್ಕೊಳ್ಳಿ, ಮುಂಡಗೋಡ), ಷರೀಪ್ (38, ರೋಡ್ ರೋಲರ್ ಕೆಲಸಗಾರ, ಸಾಲಕ್ಕೊಳ್ಳಿ), ಮತ್ತು ಶ್ರೀಮತಿ ನಾಜೀಯಾ (24, ಗೃಹಿಣಿ, ಸಾಲಕ್ಕೊಳ್ಳಿ) ಅವರನ್ನು 02/01/2022ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಯ ನಂತರ 01/04/2022ರಂದು ದೋಷಾರೋಪಣ ಪಟ್ಟಿಯನ್ನು ಜೆಎಮ್‌ಎಫ್‌ಸಿ ನ್ಯಾಯಾಲಯ, ಮುಂಡಗೋಡಕ್ಕೆ ಸಲ್ಲಿಸಲಾಯಿತು. ಪ್ರಕರಣವು ಎಸ್.ಸಿ. ಸಂಖ್ಯೆ 5032/2022ರಡಿ ದೀರ್ಘ ವಿಚಾರಣೆಗೊಳಗಾಯಿತು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಕೇರ ಅವರು ಸರ್ಕಾರದ ಪರವಾಗಿ ಪರಿಣಾಮಕಾರಿಯಾಗಿ ವಾದಿಸಿ ಆರೋಪಿಗಳಿಗೆ ಶಿಕ್ಷೆ ಖಾತ್ರಿಪಡಿಸಿದರು.

ಪೊಲೀಸರ ಕಾರ್ಯಕ್ಷಮತೆ

ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ದೀಪನ್ ಎಮ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಕೃಷ್ಣಮೂರ್ತಿ ಜಿ. ಮತ್ತು ಶ್ರೀ ಜಗದೀಶ ನಾಯಕ್, ಡಿಎಸ್‌ಪಿ ಶ್ರೀಮತಿ ಗೀತಾ ಪಾಟೀಲ, ಪಿಐ ರಂಗನಾಥ ನೀಲಮ್ಮನವರ, ಸಿಎಚ್‌ಸಿ-758 ಗಣಪತಿ ಹೊನ್ನಳ್ಳಿ, ಸಿಪಿಸಿ-1854 ತಿರುಪತಿ ಚೌಡಣ್ಣನವರ, ಮತ್ತು ಕೊರ್ಟ್ ಮಾನಿಟರಿಂಗ್ ಸಿಬ್ಬಂದಿ ಸಿಎಚ್‌ಸಿ-1190 ಕರಬಸಪ್ಪ ಲಿಂಗಸೂರ ಇದ್ದಾರೆ. ಇವರ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ