ಕೊಪ್ಪಳ, ಸೆಪ್ಟೆಂಬರ್ 16, 2025: ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸುವ ಹಿನ್ನೆಲೆಯಲ್ಲಿ ದಲಿತ ಮಹಿಳೆಯರನ್ನು ಬಹಿರಂಗವಾಗಿ ನಿಂದಿಸಿ ಅವಮಾನ ಮಾಡಿದ ಆರೋಪದ ಮೇಲೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಲಿತ ವಿಮೋಚನೆಯ ಮಾನವ ಹಕ್ಕು ಹೋರಾಟ ವೇದಿಕೆಯ ಕೊಪ್ಪಳ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ್ ಪೂಜಾರ್ ಅವರು ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ಸುವರ್ಣ ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನೆಯಲ್ಲಿ ಯತ್ನಾಳ್, “ದಲಿತ ಮಹಿಳೆಯರೂ ಚಾಮುಂಡಿ ತಾಯಿಗೆ ಹೂವು ಮುಡಿಸುವಂತಿಲ್ಲ. ಅದು ಸನಾತನ ಧರ್ಮ ಅನುಸರಿಸುವವರಿಗೆ ಮಾತ್ರ ಆ ಹಕ್ಕು ಇರುವುದು” ಎಂದು ಹೇಳಿ, ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಯ ವಿಡಿಯೋ ಫೇಸ್‌ಬುಕ್ ಮತ್ತು ಸುವರ್ಣ ಟಿವಿಯಲ್ಲಿ ವೈರಲ್ ಆಗಿತ್ತು.
ಸೆಪ್ಟೆಂಬರ್ 12ರಂದು ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನೆಯ ಬಗ್ಗೆ ಮಾತನಾಡುತ್ತಾ, ಯತ್ನಾಳ್ ದಲಿತ ಮಹಿಳೆಯರನ್ನು ಸಾಮಾನ್ಯರೆಂದು ಕರೆದು, ಹಿಂದೂ ಧರ್ಮದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸುವ ಹಕ್ಕು ಸನಾತನ ಧರ್ಮ ಅನುಸರಿಸುವವರಿಗೆ ಮಾತ್ರ ಇದೆ ಎಂದು ಹೇಳಿದ್ದರು. ಇದು ದಲಿತ ಸಮುದಾಯಕ್ಕೆ ಅಪಮಾನಕಾರಿ ಮತ್ತು ದೌರ್ಜನ್ಯದಂತಹದ್ದು ಎಂದು ಮಲ್ಲಿಕಾರ್ಜುನ್ ಪೂಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮದಲ್ಲೇ ಬರುವ ದಲಿತ ಮಹಿಳೆಯರನ್ನು ಕೀಳುಮಟ್ಟದಲ್ಲಿ ನಿಂದಿಸುವುದು ಸರಿಯಲ್ಲ ಎಂದು ಪೂಜಾರ್ ಪ್ರಶ್ನಿಸಿದ್ದಾರೆ. ಯತ್ನಾಳ್ ದಿನನಿತ್ಯ ದಲಿತರ ವಿರುದ್ಧ ಅವಹೇಳನಾತ್ಮಕ ಹೇಳಿಕೆಗಳನ್ನು ನೀಡಿ, ರಾಜ್ಯದಲ್ಲಿ ಕೋಮು ಸಂಘರ್ಷಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿರೋಧಕ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ಯತ್ನಾಳ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪೂಜಾರ್ ಅವರ ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.