ಕುಂದಾಪುರ, ಸೆಪ್ಟೆಂಬರ್ 20, 2025: ಕೋಡಿಬೆಂಗ್ರೆಯ ಹಂಗಾರಕಟ್ಟೆ ಸಮೀಪದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದ ಘಟನೆ ಸೆಪ್ಟೆಂಬರ್ 17ರಂದು ನಡೆದಿದೆ. ಘಟನೆಯಲ್ಲಿ ಬೋಟ್‌ನಲ್ಲಿದ್ದ ಐವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಡಿಬೆಂಗ್ರೆಯ ಪ್ರಕಾಶ್ ಕುಂದರ್ ಅವರಿಗೆ ಸೇರಿದ ‘ಮಹಾಕಾಳಿ’ ಎಂಬ ಹೆಸರಿನ ಬೋಟ್ ಸೆಪ್ಟೆಂಬರ್ 17ರ ಬೆಳಿಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಅಪರಾಹ್ನದ ವೇಳೆಗೆ ಹಂಗಾರಕಟ್ಟೆ ಬಂದರಿನ ಸಮೀಪ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ತಾಂತ್ರಿಕ ಸಮಸ್ಯೆಯಿಂದ ಬೋಟ್‌ನ ಇಂಜಿನ್ ಬಂದ್ ಆಗಿದೆ. ಇಂಜಿನ್ ಚಾಲು ಮಾಡಲು ಎಷ್ಟೇ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಈ ಸಂದರ್ಭದಲ್ಲಿ, ಗಾಳಿಯ ರಭಸ ಮತ್ತು ಸಮುದ್ರದ ಅಲೆಗಳ ಒತ್ತಡದಿಂದ ಬೋಟ್ ಕೋಡಿ ಕನ್ಯಾನ ಗ್ರಾಮದ ಕೋಡಿ ಸಮುದ್ರ ತೀರಕ್ಕೆ ತಲುಪಿ ದಡಕ್ಕೆ ಅಪ್ಪಳಿಸಿತು.
ಘಟನೆಯಿಂದ ಬೋಟ್ ಮತ್ತು ಅದರೊಳಗಿನ ಇತರ ಸಾಮಗ್ರಿಗಳು ಹಾನಿಗೊಳಗಾಗಿದ್ದು, ಸುಮಾರು 10 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಆದರೆ, ಬೋಟ್‌ನಲ್ಲಿದ್ದ ಐವರು ಮೀನುಗಾರರು ಸುರಕ್ಷಿತವಾಗಿ ಪಾರಾಗಿದ್ದಾರೆ.