ಕುಂದಾಪುರ, ಸೆಪ್ಟೆಂಬರ್ 07, 2025: ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಸಮುದ್ರದಲ್ಲಿ ಈಜಲು ತೆರಳಿದ ಬೆಂಗಳೂರಿನ ನಾಲ್ವರು ಯುವಕರು ಸಮುದ್ರದ ರಭಸದ ಅಲೆಗೆ ಸಿಲುಕಿ ನೀರುಪಾಲಾದ ದುರ್ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ, ಮತ್ತು ಒಬ್ಬನನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಿಸಲಾಗಿದೆ.

ಬೆಂಗಳೂರಿನಿಂದ ಬಂದ 10 ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಾಂಪೌಂಡ್‌ನಲ್ಲಿ ತಂಗಿದ್ದು, ಇಂದು ಮಧ್ಯಾಹ್ನ 9 ಮಂದಿ ಸಮುದ್ರ ಸ್ನಾನಕ್ಕಾಗಿ ಗೋಪಾಡಿ ಚೆರ್ಕಿ ಕಡುವಿನ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ನಾಲ್ವರು ಯುವಕರು ಸಮುದ್ರದ ರಭಸದ ಅಲೆಗೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಸ್ಥಳೀಯರು ಮತ್ತು ಜೊತೆಗಿದ್ದ ಯುವಕರು ಸೇರಿ ಒಬ್ಬನನ್ನು ತಕ್ಷಣ ರಕ್ಷಿಸಿದರೂ, ಆತ ಗಂಭೀರ ಸ್ಥಿತಿಯಲ್ಲಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಮುಳುಗು ತಜ್ಞರಾದ ಈಶ್ವರ್ ಮಲ್ಪೆ, ಜೀವನ್ ಮಿತ್ರ ನಾಗರಾಜ್ ಪುತ್ರಾನ್, ಮತ್ತು ದಿನೇಶ್ ಖಾರ್ವಿ ಅವರು ಸ್ಥಳೀಯರ ಸಹಕಾರದೊಂದಿಗೆ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇನ್ನೊಬ್ಬ ಯುವಕ ಇನ್ನೂ ನಾಪತ್ತೆಯಾಗಿದ್ದು, ಅವನಿಗಾಗಿ ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ, ಆಂಬುಲೆನ್ಸ್ ಚಾಲಕರು, ಮತ್ತು ಸಮಾಜ ಸೇವಕರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮೃತರ ಮತ್ತು ನಾಪತ್ತೆಯಾದವರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.