ಕುಂದಾಪುರ: ಕುಂದಾಪುರ ತಾಲೂಕಿನ ಕೊಲ್ಲೂರು ಸೌಪರ್ಣಿಕಾ ನದಿ ತೀರದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಸುಧಾ ಚಕ್ರವರ್ತಿ (46) ಶವವಾಗಿ ಪತ್ತೆಯಾಗಿದೆ. 72 ಗಂಟೆಗಳ ತೀವ್ರ ಹುಡುಕಾಟ ಕಾರ್ಯಾಚರಣೆಯ ಬಳಿಕ ಸೌಪರ್ಣಿಕಾ ನದಿಯ ತಟದಿಂದ ಸುಮಾರು 3 ಕಿ.ಮೀ. ದೂರದ ದುರ್ಗಮ ಕಾಡಿನಲ್ಲಿ ಮೃತದೇಹವನ್ನು ಪೊಲೀಸ್ ತಂಡ ಪತ್ತೆ ಮಾಡಿದೆ.

ಮೃತದೇಹವನ್ನು ಕೊಲ್ಲೂರಿಗೆ ಸಾಗಿಸಲು ಸಹಕರಿಸಿದ ತಂಡಕ್ಕೆ ಕುಂದಾಪುರ ಪೊಲೀಸ್ ಇಲಾಖೆಯ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಚಿನ್ ಜಿ., ರವಿ ಮಂಜುನಾಥ್ ಗೌಡ, ಮುಳುಗುತಜ್ಞರಾದ ಈಶ್ವರ್ ಮಲ್ಪೆ, ಹರೀಶ್ ಪೂಜಾರಿ, ಗಂಗೊಳ್ಳಿಯ ಆಪತ್ಬಾಂಧವ 24×7 ತಂಡದ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ, ಸ್ಥಳೀಯರಾದ ಪ್ರದೀಪ್ ಭಟ್ ಸಂಪ್ರೆ, ನಾಗರಾಜ್ ನಾಯಕ್ ಬಾವಡಿ, ಉಮೇಶ್ ಭಟ್ ಗೊಳಿಗುಡ್ಡೆ ಹಾಗೂ ಕೊಲ್ಲೂರು ಠಾಣಾಧಿಕಾರಿ ವಿನಯ್ ಎಂ. ಕೊರ್ಲಹಳ್ಳಿ ಮತ್ತಿತರ ಸಿಬ್ಬಂದಿ ಸೇರಿದ್ದರು.
ಮೊಹಮ್ಮದ್ ಇಬ್ರಾಹಿಂ ಎಚ್.ಎಚ್. ಅವರು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ತಮ್ಮ ತಂಡದ ಸದಸ್ಯರಾದ ಬಬ್ಬಾ ಇಬ್ರಾಹಿಂ ಮತ್ತು ವಿಕಾಸ್ ಅವರ ಸಂಯುಕ್ತ ಪ್ರಯತ್ನಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಳೆಯ ನಡುವೆಯೂ ದುರ್ಗಮ ಕಾಡಿನ ಹಾದಿಯಲ್ಲಿ 3 ಕಿ.ಮೀ. ದೂರ ಮೃತದೇಹವನ್ನು ಹೊತ್ತು ತಂದ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ಕಾರ್ಯಾಚರಣೆಯನ್ನು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷಕ ನಿಲೇಶ್ ಚೌಹಾಣ್, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಡಿ. ಗೌಡ ಮತ್ತಿತರರು ಉಪಸ್ಥಿತರಿದ್ದರು.