ಕುಂದಾಪುರ, ಸೆಪ್ಟೆಂಬರ್ 06, 2025: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದ ಮಣಿಮಕ್ಕಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಸದಸ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಾಗೂ ಶ್ರೀ ರಟ್ಟೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮುಖ್ಯಸ್ಥ ನವೀನ್ ಚಂದ್ರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನಡೆಯುತ್ತಿರುವ ಧರ್ಮ ಸಂರಕ್ಷಣಾ ಯಾತ್ರೆಗೆ ಜನರನ್ನು ಸಂಘಟಿಸುವ ಜವಾಬ್ದಾರಿಯನ್ನು ನವೀನ್ ಚಂದ್ರ ಶೆಟ್ಟಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕರಪತ್ರಗಳನ್ನು ಹಂಚಲು ಧರ್ಮಸ್ಥಳ ಸಂಘದ ವಿವಾಹಿತ ಸದಸ್ಯೆಯೊಬ್ಬರಿಗೆ ಕರೆ ಮಾಡಿ, ಹೆಚ್ಚುವರಿ ಕರಪತ್ರಗಳನ್ನು ತಮ್ಮ ಮನೆಗೆ ತಂದುಕೊಡುವಂತೆ ಕೇಳಿದ್ದರು. ಮಧ್ಯಾಹ್ನ ಸಂತ್ರಸ್ತೆ ಆರೋಪಿಯ ಮನೆಗೆ ತೆರಳಿದಾಗ, ಕರಪತ್ರಗಳನ್ನು ಒಪ್ಪಿಸುವ ವೇಳೆ ನವೀನ್ ಚಂದ್ರ ಶೆಟ್ಟಿ ಆಕೆಯ ಕೈಯನ್ನು ಸ್ಪರ್ಶಿಸಿ, ನಂತರ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿ, ಹತ್ತಿರಕ್ಕೆ ಎಳೆದು ಬಲ ಕೆನ್ನೆಗೆ ಚುಂಬಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಯಗೊಂಡ ಸಂತ್ರಸ್ತೆ ಅಲ್ಲಿಂದ ನಿರ್ಗಮಿಸಿದರೂ, ಆರೋಪಿ ಆಕೆಯನ್ನು ಹಿಂಬಾಲಿಸಿ ಮರಳಿ ಬರುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ತನ್ನ ಕುಟುಂಬಕ್ಕೆ ವಿಷಯ ತಿಳಿಸಿ, ಅಮಾವಾಸ್ಯೆ ಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಕೆಲವು ಶಾಸಕರು ಪ್ರಯತ್ನಿಸಿದರೂ, ಸಂತ್ರಸ್ತೆಯ ಕುಟುಂಬ ನಿರಾಕರಿಸಿದೆ ಎನ್ನಲಾಗಿದೆ. ಆರೋಪಿ ನವೀನ್ ಚಂದ್ರ ಶೆಟ್ಟಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರೋಪಿ ಬಂಧನಕ್ಕೆ ಸಿಪಿಎಂ ಆಗ್ರಹ :
ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಧರ್ಮಸ್ಥಳ ಯೋಜನೆಯ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಧರ್ಮಸ್ಥಳ ಸಂಘದ ಸದಸ್ಯೆಯನ್ನು ಧರ್ಮ ರಕ್ಷಣೆಯ ಕೆಲಸದ ಮೇಲೆ ಶುಕ್ರವಾರ ಮನೆಗೆ ಕರೆಯಿಸಿ ಮಾನಭಂಗಕ್ಕೆ ಯತ್ನಿಸಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಆರೋಪಿ ನವೀನ್ ಚಂದ್ರಶೆಟ್ಟಿ ಪರ ನಿಂತು ಪಂಚಾಯಿತಿ ಮಾಡಲು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿರುವುದು ತಿಳಿದುಬಂದಿದೆ. ಇದು ಖಂಡನೀಯವಾಗಿದ್ದು, ಆರೋಪಿ ನವೀನ್ ಚಂದ್ರ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ದೂರು ನೀಡಿರುವುದರಿಂದ ತಕ್ಷಣವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಆ ಮೂಲಕ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.