ಮಲ್ಪೆ, ಆಗಸ್ಟ್ 29, 2025: ಇಂದು ಬೆಳಗ್ಗೆ ಮಲ್ಪೆಯ ತೊಟ್ಟಂ ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಭಾರೀ ಅಲೆಗಳಿಗೆ ಸಿಲುಕಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ. ಈ ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರಾದ ಜೀವನ್ ಎಂಬವರ ಒಡೆತನದ ದೋಣಿಯಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯು ಪ್ರಕ್ಷುಬ್ಧ ಅಲೆಗಳಿಗೆ ಸಿಲುಕಿ ಮಗುಚಿತು. ಸ್ಥಳೀಯರು ಈ ಬಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಈಶ್ವರ್ ಮಲ್ಪೆ ತಂಡ, ಮೀನುಗಾರರಾದ ಪ್ರವೀಣ್ ಮತ್ತು ಉದಯ್ ಜೊತೆಗೂಡಿ ನೀರಿಗೆ ಇಳಿದು, ಅಪಾಯದಲ್ಲಿದ್ದ ನಾಲ್ವರು ಮೀನುಗಾರರಿಗೆ ಲೈಫ್ ಜಾಕೆಟ್‌ಗಳನ್ನು ನೀಡಿ ಸುರಕ್ಷಿತವಾಗಿ ರಕ್ಷಿಸಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರಿಕೆಗೆ ತೆರಳುವವರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕೆಂದು ಈಶ್ವರ್ ಮಲ್ಪೆ ತಂಡವು ಮೀನುಗಾರರಿಗೆ ಮನವಿ ಮಾಡಿದೆ.