ಮಲ್ಪೆ, ಆಗಸ್ಟ್ 27, 2025: ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಸಿಟಿಜನ್ ಸರ್ಕಲ್ ಸಮೀಪ ರಾಣಾಪ್ರತಾಪ್ ಸಿಂಗ್ ಮಾರ್ಗದಲ್ಲಿ ದಿನಾಂಕ 26-08-2025 ರಂದು ಮಧ್ಯಾಹ್ನ 2:30 ಗಂಟೆಗೆ ನಡೆದ ವಾಹನ ತಪಾಸಣೆಯ ವೇಳೆ, ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಡಿ. ಮತ್ತು ಸಿಬ್ಬಂದಿಗಳು ಅಕ್ರಮ ಮರಳು ಸಾಗಾಟದ ಘಟನೆಯನ್ನು ಪತ್ತೆಹಚ್ಚಿದ್ದಾರೆ.
ಕೊಡವೂರು ಜಂಕ್ಷನ್‌ನಿಂದ ಸಿಟಿಜನ್ ಸರ್ಕಲ್ ಕಡೆಗೆ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬಂದ ಕ್ರೀಮ್ ಮತ್ತು ಹಳದಿ ಬಣ್ಣದ ಟಾಟಾ 407 ಗೂಡ್ಸ್ ವಾಹನ (ನಂಬರ್: KL20C9644) ವನ್ನು ತಪಾಸಣೆಗೆ ಒಳಪಡಿಸಿದಾಗ, ವಾಹನದಲ್ಲಿ ಸುಮಾರು 1½ ಯುನಿಟ್ ಮರಳು ತುಂಬಿರುವುದು ಕಂಡುಬಂದಿದೆ. ಚಾಲಕನಾದ ಹಂಝ ಎಂಬಾತನನ್ನು ವಿಚಾರಿಸಿದಾಗ, ಮರಳು ಸಾಗಾಟಕ್ಕೆ ಯಾವುದೇ ಪರವಾನಗಿ ಅಥವಾ ದಾಖಲಾತಿಗಳಿಲ್ಲ ಎಂದು ತಿಳಿಸಿದ್ದಾನೆ. ಆರೋಪಿತನು ಯಾವುದೋ ಸ್ಥಳದಿಂದ ಮರಳನ್ನು ಕದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿದಿದ್ದಾರೆ.
ಪೊಲೀಸರು ಮಹಜರು ಮೂಲಕ ವಾಹನ ಮತ್ತು ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಜಪ್ತಿಯಾದ ಮರಳಿನ ಅಂದಾಜು ಮೌಲ್ಯ ರೂ. 5,000/- ಮತ್ತು ಟಾಟಾ 407 ವಾಹನದ ಅಂದಾಜು ಮೌಲ್ಯ ರೂ. 2,00,000/- ಆಗಿರಬಹುದು. ಈ ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2025, ಕಲಂ 303(2) BNS ಮತ್ತು 4, 4(A), 21 MMDR ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.