ಮಂಗಳೂರು, ಸೆಪ್ಟೆಂಬರ್ 09, 2025: ಕೂಳೂರು ರಾಯಲ್ ಓಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಗುಂಡಿಗೆ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಮಹಿಳೆಯ ಮೇಲೆ ಮೀನಿನ ಲಾರಿ ಹರಿದು ಅವರು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ನಡೆದಿದೆ.

ಮೃತರನ್ನು ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ ಎಂದು ಗುರುತಿಸಲಾಗಿದೆ. ಮಾಧವಿ ಅವರು ಕೂಳೂರಿನಿಂದ ಎ.ಜೆ. ಆಸ್ಪತ್ರೆಗೆ ಉದ್ಯೋಗದ ನಿಮಿತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಹೆದ್ದಾರಿಯ ಗುಂಡಿಗೆ ಸ್ಕೂಟರ್ ಬಿದ್ದು ಪಲ್ಟಿಯಾಗಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಮಾಧವಿ ಅವರ ಮೇಲೆ ಹಿಂದಿನಿಂದ ಬಂದ ಮೀನಿನ ಲಾರಿಯ ಚಕ್ರ ಹರಿದು, ಅವರ ಹೊಟ್ಟೆಯ ಮೇಲ್ಬಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಎ.ಜೆ. ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಕ್ಕಿಹೊಡೆದ ಮೀನಿನ ಲಾರಿ ಮತ್ತು ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.