ಮೈಸೂರು, ಸೆಪ್ಟೆಂಬರ್ 15, 2025: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪ್ರಸಕ್ತ ವರ್ಷದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ಟಿ ಗಿರೀಶ್ ಕುಮಾರ್ ಮತ್ತು ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್ ಸೌಮ್ಯಾ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಹೇಗೆ ಉಲ್ಲಂಘಿಸುತ್ತದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ಆದ್ದರಿಂದ, ಈ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ವಿಸ್ತೃತ ಆದೇಶವನ್ನು ನಂತರ ಪ್ರಕಟಿಸಲಾಗುವುದು,” ಎಂದು ನ್ಯಾಯಾಲಯ ತೀರ್ಪು ನೀಡಿತು.

ಪ್ರತಾಪ್ ಸಿಂಹ ಅವರ ಪರ ವಕೀಲ ಎಸ್ ಸುದರ್ಶನ್, “ಬಾನು ಮುಷ್ತಾಕ್ ಅವರು ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಶಿಷ್ಟಾಚಾರವನ್ನು ಪಾಲಿಸಬೇಕು, ಆದರೆ ಇದನ್ನು ಅನುಸರಿಸಿಲ್ಲ. ಬಾನು ಮುಷ್ತಾಕ್ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಒಂದು ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ,” ಎಂದು ವಾದಿಸಿದರು.
ಇದಕ್ಕೆ ಪೀಠವು, “ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಲು ನಿಮಗೆ ಯಾವ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಹಕ್ಕಿದೆ? ಶಿಷ್ಟಾಚಾರವನ್ನು ಪಾಲಿಸುವುದು ಅವರ ವೈಯಕ್ತಿಕ ವಿಚಾರ,” ಎಂದು ಪ್ರತಿಕ್ರಿಯಿಸಿತು.
ಇನ್ನೊಬ್ಬ ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ರಂಗನಾಥ್ ರೆಡ್ಡಿ, “ಹಿಂದೂ ದೇವರ ಪೂಜೆಯನ್ನು ಆಗಮ ಶಾಸ್ತ್ರದಿಂದ ಪ್ರತ್ಯೇಕಿಸಲಾಗದು. ಹಿಂದೂಯೇತರ ವ್ಯಕ್ತಿಯು ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇದೆ. ಬಾನು ಮುಷ್ತಾಕ್ ಅವರು ಹಿಂದೂ ದೇವರ ಮೇಲೆ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರೆ ನಮಗೆ ಆಕ್ಷೇಪವಿಲ್ಲ,” ಎಂದರು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, “ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕು. ಅವರು ಸಂಸದರಾಗಿದ್ದಾಗ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು, ಆಗ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ವಿಜೇತರಾಗಿದ್ದು, ರಾಜ್ಯದ ಹಬ್ಬವಾದ ದಸರಾವನ್ನು ಉದ್ಘಾಟಿಸಲು ಆಯ್ಕೆಯಾಗಿದ್ದಾರೆ. ಇದು ಸಂವಿಧಾನದ 15ನೇ ವಿಧಿಗೆ ಅನುಗುಣವಾಗಿದೆ. ಎಲ್ಲಾ ಪಕ್ಷಗಳ ಮುಖಂಡರಿಂದ ರಚಿತವಾದ ದಸರಾ ಸಮಿತಿಯು ಮುಖ್ಯಮಂತ್ರಿಗೆ ಅತಿಥಿ ಆಯ್ಕೆಯ ಶಿಫಾರಸು ಮಾಡಿತ್ತು,” ಎಂದು ವಾದಿಸಿದರು.
“ಹಿಂದೂ-ಮುಸ್ಲಿಮ್ ಎಂದು ಭೇದ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಸರಾ ಜಾತ್ಯತೀತ ಹಬ್ಬವಾಗಿದ್ದು, ಇದನ್ನು ಧಾರ್ಮಿಕ ಕಾರ್ಯಕ್ರಮವೆಂದು ಬಿಂಬಿಸಲಾಗುತ್ತಿದೆ,” ಎಂದು ಶೆಟ್ಟಿ ಆಕ್ಷೇಪಿಸಿದರು.
ಪ್ರತಾಪ್ ಸಿಂಹ ಅವರ ವಕೀಲರು, “ನಿಸಾರ್ ಅಹ್ಮದ್ ಕನ್ನಡದ ಬಗ್ಗೆ ಪದ್ಯ ಬರೆದಿದ್ದರು ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿರಲಿಲ್ಲ,” ಎಂದು ವಾದಿಸಿದಾಗ, ಪೀಠವು, “ವಿಜಯದಶಮಿ ಎಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ,” ಎಂದಿತು.
ವಾದವನ್ನು ಮುಂದುವರಿಸಲು ಯತ್ನಿಸಿದ ಪ್ರತಾಪ್ ಸಿಂಹ ಅವರ ವಕೀಲರಿಗೆ ಪೀಠವು, “ನಮ್ಮ ಆದೇಶ ನೀಡಲಾಗಿದೆ. ದಂಡ ವಿಧಿಸಬೇಕೆ? ಈ ನ್ಯಾಯಾಲಯದಲ್ಲಿ ಇಂತಹ ವಾದ ಮಾಡಲಾಗದು,” ಎಂದು ಎಚ್ಚರಿಕೆ ನೀಡಿತು.