ಉಡುಪಿ, ಆಗಸ್ಟ್ 22, 2025: ಸಾಸ್ತಾನದ ಕೋಡಿತಲೆ ಸೀತಾನದಿ ಹೊಳೆಯ ಅಳಿವೆ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಅಲೆಗಳ ರಭಸಕ್ಕೆ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಮೃತ ಮೀನುಗಾರನನ್ನು ಶರತ್ ಖಾರ್ವಿ (27) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಶರತ್ ಖಾರ್ವಿ, ಅಕ್ಷಯ್ ಖಾರ್ವಿ, ಮತ್ತು ಮಂಜುನಾಥ್ ಖಾರ್ವಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸೀತಾನದಿ ಹೊಳೆಯ ಅಳಿವೆ ಭಾಗದಲ್ಲಿ ದೋಣಿ ತೀವ್ರ ಅಲೆಗಳಿಗೆ ಸಿಲುಕಿ ಮಗುಚಿಬಿದ್ದು, ಮೂವರು ಸಮುದ್ರದ ನೀರಿಗೆ ಬಿದ್ದಿದ್ದಾರೆ. ಅಕ್ಷಯ್ ಖಾರ್ವಿ ಮತ್ತು ಮಂಜುನಾಥ್ ಖಾರ್ವಿ ಈಜಿ ದಡ ಸೇರಿದರೆ, ಶರತ್ ಖಾರ್ವಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪಾರಾದ ಮೀನುಗಾರರಾದ ಮಂಜುನಾಥ್ ಖಾರ್ವಿ ಮತ್ತು ಅಕ್ಷಯ್ ಖಾರ್ವಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೋಣಿ ಸಮುದ್ರದಲ್ಲಿ ಮುಳುಗಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ಕ್ರಮಾಂಕ 45/2025 ಕಲಂ:194 ಬಿ.ಎನ್.ಎಸ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ, ಮತ್ತು ತನಿಖೆ ನಡೆಯುತ್ತಿದೆ.