ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ತೀವ್ರ ವಿರೋಧ; ಪರಿಸರ ವರದಿ ಸುಳ್ಳು: ಶರಾವತಿ ನದಿ ಕಣಿವೆ ಹೋರಾಟ ಸಮಿತಿ

ಹೊನ್ನಾವರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ EIPEA ವರದಿ “ಸುಳ್ಳು” ಎಂದು ಹೋರಾಟ ಸಮಿತಿ ಖಂಡನೆ. ಉಪ್ಪುನೀರು ಸಮಸ್ಯೆ, ಭೂಸಡಿಲಿಕೆ ಅಪಾಯ, ರೈತ-ಮೀನುಗಾರರ ಹಾನಿ ಎತ್ತಿ. ಸಪ್ಟೆಂಬರ್ 18ರ ಅಹವಾಲು ಸಭೆಗೆ ಸಾರ್ವಜನಿಕರ ಆಹ್ವಾನ.

ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ತೀವ್ರ ವಿರೋಧ; ಪರಿಸರ ವರದಿ ಸುಳ್ಳು: ಶರಾವತಿ ನದಿ ಕಣಿವೆ ಹೋರಾಟ ಸಮಿತಿ

ಹೊನ್ನಾವರ, ಸೆಪ್ಟೆಂಬರ್ 17, 2025: ಶರಾವತಿ ನದಿ ಕಣಿವೆಯಲ್ಲಿ ನಿರ್ಮಾಣಕ್ಕೆ ಯೋಜನೆಯಾಗಿರುವ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನ (EIPEA) ವರದಿಯನ್ನು “ಸಂಪೂರ್ಣ ತಪ್ಪು, ಜನರನ್ನು ದಾರಿತಪ್ಪಿಸುವ, ಯೋಜನಾ ಪರವಾದ ಸುಳ್ಳು ವರದಿ” ಎಂದು ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಪ್ಟೆಂಬರ್ 18ರಂದು ಗೇರುಸೊಪ್ಪೆಯ ಉಪ್ಪಿನಗುಳಿಯಲ್ಲಿ ನಡೆಯುವ ಸಾರ್ವಜನಿಕ ಅಹವಾಲು ಆಲಿಕೆ ಸಭೆಯ ಮುನ್ನವೇ, ಜಿಲ್ಲಾಧಿಕಾರಿಗಳಿಗೆ ಸಮಿತಿ ಅಭಿಪ್ರಾಯ ಸಲ್ಲಿಸಿದ್ದು, ಸಭೆಯಲ್ಲೂ ಅಂಕಿ ಅಂಶಗಳೊಂದಿಗೆ ಮನವಿ ಸಲ್ಲಿಸಲಿದೆ. ಸಾರ್ವಜನಿಕರನ್ನು ಸಭೆಗೆ ಆಹ್ವಾನಿಸಿ, ಅಭಿಪ್ರಾಯ ದಾಖಲಿಸುವಂತೆ ಕರೆ ನೀಡಿದೆ.

ಸಮಿತಿಯ ಪ್ರಕಟಣೆಯ ಪ್ರಕಾರ, ಯೋಜನೆಯ ವ್ಯಾಪ್ತಿ ಪ್ರದೇಶದ ಹಳ್ಳಿಗಳು, ರೈತರು, ಮೀನುಗಾರರು, ನದಿ ಪರಿಸರದ ಮೇಲಿನ ದುಷ್ಪರಿಣಾಮಗಳ ಬಗ್ಗೆ ವರದಿಯಲ್ಲಿ ಕನಿಷ್ಠ ಮಾಹಿತಿಯೂ ಇಲ್ಲ. ಗೇರುಸೊಪ್ಪೆ ಜಲಾಶಯದ ನೀರು ನಿರ್ವಹಣೆಯ ಲೋಪದಿಂದಾಗಿ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರು 15 ಕಿ.ಮೀ. ವ್ಯಾಪ್ತಿಯಲ್ಲಿ ನದಿಗೆ ಸೇರಿ, ಸಾವಿರಾರು ರೈತರು ಬವಣೆ ಪಡುತ್ತಿದ್ದಾರೆ. ಯೋಜನೆಯಿಂದ ಉಪ್ಪುನೀರು ಗೇರುಸೊಪ್ಪೆಯವರೆಗೆ ಹಿಂದುಹಿಮ್ಮೆ ಸೇರಲಿದ್ದು, ಒಂದು ಲಕ್ಷ ರೈತರು, ಮೀನುಗಾರರು ಬೆಳೆ ಬೆಳೆಯಲಾರದ, ಮೀನು ಕ್ಷಾಮ, ಉಪ್ಪುನೀರು ಕುಡಿಯುವ ಪರಿಸ್ಥಿತಿಗೆ ತಲುಪುತ್ತಾರೆ ಎಂದು ಸಮಿತಿ ಆರೋಪಿಸಿದೆ.

ಭೂಗರ್ಭದಲ್ಲಿ 30 ಅಡಿ ವ್ಯಾಸದ 14 ಕಿ.ಮೀ. ಸುರಂಗ ನಿರ್ಮಾಣದಿಂದ ಭೂಸಡಿಲಿಕೆ, ಭೂಕುಸಿತ ಅಪಾಯ, ಆಣೆಕಟ್ಟೆಗಳ ಸುರಕ್ಷತೆಗೆ ಬೆದರಿಕೆ ಇದೆ ಎಂದು ವಿಜ್ಞಾನಿಗಳ ಎಚ್ಚರಿಕೆಯನ್ನು ವರದಿಯಲ್ಲಿ ಪರಿಗಣಿಸದಿರುವುದನ್ನು ಸಮಿತಿ ಖಂಡಿಸಿದೆ. ಅರಣ್ಯ ತಿರುವು ಮತ್ತು NBWL ಅನುಮೋದನೆ ಅಗತ್ಯವಿದ್ದರೂ, ಕಾಮಗಾರಿಗೆ ಗುತ್ತಿಗೆದಾರ ನಿಯೋಜನೆಯಾಗಿರುವುದು ಅಹವಾಲು ಸಭೆಯನ್ನು ನಾಮಕಾವ್ಯವಾಗಿಸಿದೆ ಎಂದು ಅನುಮಾನ ವ್ಯಕ್ತಪಡಿಸಿದೆ.

ಸಮಿತಿ, ಯೋಜನೆ ಬದಲು ಕರಾವಳಿ-ಮಲೆನಾಡ ಹಳ್ಳಿಗಳಿಗೆ ಛಾವಣಿ ಸೌರ ವಿದ್ಯುತ್, ಪರಿಸರ ಸ್ನೇಹಿ ಇಂಧನ ಮೂಲಗಳ ಯೋಜನೆಗಳಿಗೆ ಕೆಪಿಸಿಯನ್ನು ಮುಂದು ಮಾಡಬೇಕು ಎಂದು ಕೇಂದ್ರ-ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ. ಸಾರ್ವಜನಿಕರನ್ನು ಅಹವಾಲು ಸಭೆಗೆ ಆಹ್ವಾನಿಸಿ, ಅಭಿಪ್ರಾಯ ದಾಖಲಿಸುವಂತೆ ಕರೆ ನೀಡಿದ್ದು, ಯೋಜನೆಯ ಮಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಈ ಲೇಖನವನ್ನು ಹಂಚಿಕೊಳ್ಳಿ