ಲೇಖನಗಳು

ಸಿದ್ದರಾಮಯ್ಯನವರಿಗೆ ಮುಸ್ಲಿಮರನ್ನು ಓಲೈಸುವ ಕೆಟ್ಟ ಅಭ್ಯಾಸ ಇದೆ..

ಸಿದ್ದರಾಮಯ್ಯ ಸರ್ಕಾರವು ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಹಬ್ಬದ ಉದ್ಘಾಟನೆಗೆ ಆಹ್ವಾನಿಸಿರುವ ಕ್ರಮಕ್ಕೆ ಕರ್ನಾಟಕದ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ವಿಷಯದ ಕುರಿತು ಖ್ಯಾತ ಲೇಖಕ ಮುಷ್ತಾಕ್ ಹೇನಬೈಲ್ ಅವರು ಬರೆದ ಲೇಖನವನ್ನು ಕೆಳಗೆ ನೀಡಲಾಗಿದೆ.

ಸಿದ್ದರಾಮಯ್ಯನವರಿಗೆ ಮುಸ್ಲಿಮರನ್ನು ಓಲೈಸುವ ಕೆಟ್ಟ ಅಭ್ಯಾಸ ಇದೆ..

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಸಮಂಜಸ ಆಯ್ಕೆ ಅಲ್ಲ. ಯಾರೇನೇ ಅಂದರೂ, ದಸರಾ ಧಾರ್ಮಿಕ ಮೂಲವಾದ ಒಂದು ಆಚರಣೆ. ಈ ನಾಡ ಹಬ್ಬದಲ್ಲಿ ಬಹುಸಂಖ್ಯಾತರು ತಮ್ಮ ನಂಬಿಕೆಗಳ ಪ್ರಕಾರ ತಮ್ಮ ಆಚರಣೆಗಳನ್ನು ಮಾಡಿಕೊಳ್ಳುತ್ತಾರೆ. ಉಳಿದ ಸಮುದಾಯಗಳು ಧಾರ್ಮಿಕತೆಯನ್ನು ಹೊರತುಪಡಿಸಿ ಬಹುಸಂಖ್ಯಾತರೊಂದಿಗೆ ಸದ್ಭಾವನೆ ಮತ್ತು ನಾಡಿನ ಸಮಗ್ರತೆಯ ಸಂಕೇತರೂಪವಾಗಿ ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲಿ ದಸರಾಗೆ ಚಾಲನೆ ನೀಡುವವರು ಮತ್ತು ಅದರ ಪ್ರಮುಖ ಕ್ರಿಯೆಗಳಲ್ಲಿ ಭೂಮಿಕೆ ನಿಭಾಯಿಸುವರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಲ್ಲಿ ಆಚರಿಸುವ ಧಾರ್ಮಿಕತೆಯಲ್ಲಿ ನಂಬಿಕೆ ಇಲ್ಲದವರು ಮತ್ತು ದೇವರಲ್ಲಿ ನಂಬಿಕೆ ಇಲ್ಲದವರು ಹೀಗೆ ಪಾಲ್ಗೊಂಡರೆ ಅದು ಅವಕಾಶವಾದಿತನ ಹಾಗೂ ಕಾಪಠ್ಯವಾಗುತ್ತದೆ. ಬಾನುವನ್ನು ಸಿದ್ದರಾಮಯ್ಯ ಸರ್ಕಾರ ಹೀಗೆ ಬಳಸಿಕೊಂಡಿರುವುದು ಒಂದು ಪೊಲಿಟಿಕಲ್ ಮೂವ್..

ಬಾನು ಮುಷ್ತಾಕ್ ನಾಡಿನ ಹೆಮ್ಮೆಯ ಸಾಹಿತಿ ಹೌದು. ಭಾಷೆಯನ್ನು ಜಗದಗಲ ಪಸರಿಸಿದ ರಾಯಭಾರಿಯೂ ಹೌದು. ಇವರ ವ್ಯಕ್ತಿತ್ವ ಮತ್ತು ವಿಚಾರಗಳಲ್ಲಿ ಕನ್ನಡ ಮಣ್ಣಿನ ಸೊಗಡಿರುವುದೂ ಹೌದು. ಸರಳತೆ ಸಜ್ಜನಿಕೆಯಿಂದ ಕೂಡಿದ ಸುಸಂಸ್ಕೃತ ಹೆಣ್ಣುಮಗಳೂ ಹೌದು. ಆದರೆ ಧಾರ್ಮಿಕ ಜ್ಞಾನದ ವಿಚಾರ ಬಂದಾಗ, ಬಾನು ಅಪ್ಪಟ ಅನಕ್ಷರಸ್ಥೆ. ಇವರ ಸಾಹಿತ್ಯದ ಅತಿದೊಡ್ಡ ವೀಕ್ನೆಸ್ ಏನೆಂದರೆ, ಅದು ಧಾರ್ಮಿಕ ಜ್ಞಾನದಿಂದ ವಂಚಿತರಾಗಿ ಬರೆಯುವುದು. ಪ್ರತಿಯೊಂದು ಧರ್ಮವು ವಿಮರ್ಶೆ ಮತ್ತು ಸಂಕುಚಿತ ವಿವೇಕಗಳನ್ನು ಪ್ರತಿರೋಧಿಸಿಯೇ ಬೆಳೆದಿವೆ. ಇಸ್ಲಾಂ ಕೂಡ ಇದಕ್ಕೆ ಹೊರತಲ್ಲ. ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕು, ವಧುದಕ್ಷಿಣೆಯ ಹಕ್ಕು, ವಿಧವಾ ವಿವಾಹದ ಹಕ್ಕು, ಸರಕಾರಿ ವರಮಾನದ ಹಕ್ಕು, ಪಾನ ನಿಷೇಧದ ಸೌಲಭ್ಯ ಮುಂತಾದ ನೂರಾರು ಹಕ್ಕು ಸವಲತ್ತುಗಳನ್ನು 1400 ವರ್ಷಗಳ ಹಿಂದೆಯೇ ಜಗತ್ತಿನಲ್ಲಿ ಮೊಟ್ಟಮೊದಲು ಪಡೆದದ್ದು ಮುಸ್ಲಿಂ ಮಹಿಳೆಯರು. ಹೀಗಿದ್ದರೂ ಬಾನು ತಮ್ಮ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಪರವಾಗಿ ಹಕ್ಕು ಸೌಲಭ್ಯಗಳಿಲ್ಲ ಎಂದು ವಿಕ್ಟಿಮ್ ಕಾರ್ಡ್ ಪ್ರಯೋಗಿಸುತ್ತಾರೆ. ತಲಾಖ್ ಕಾನೂನು ಮುಸ್ಲಿಂ ಮಹಿಳೆಯರ ವಿವಾಹವನ್ನು ಶಾಸನದ ವ್ಯಾಪ್ತಿಗೆ ತಂದ ಜಗತ್ತಿನ ಮೊಟ್ಟಮೊದಲ ಕಾನೂನು ಎನ್ನುವ ಸರಳ ಜ್ಞಾನ ಬಾನುರವರಿಗೆ ಇನ್ನಷ್ಟೇ ಮೂಡಬೇಕಿದೆ..

ಮುಸ್ಲಿಂ ಹೆಣ್ಣುಮಕ್ಕಳು 4 ವರ್ಷದ ಪ್ರಾಯದಲ್ಲೇ ಅತ್ಯಂತ ಕ್ಲಿಷ್ಟ ಭಾಷೆಯ ಅರಬ್ಬಿ ಶಿಕ್ಷಣವನ್ನು ಪಡೆಯಲು ಆರಂಭಿಸುತ್ತಾರೆ. ಬಾನು ನಾಡಿನ ಅತ್ಯಂತ ಅದೃಷ್ಟವಂತ ಸಾಹಿತಿ. ಯಾಕೆಂದರೆ ಇಸ್ಲಾಮಿಕ್ ತತ್ವ ಮತ್ತು ಮುಸ್ಲಿಂ ಜ್ಞಾನದ ದೃಷ್ಟಿಕೋನದಿಂದ ಬಾನು ಸಾಹಿತ್ಯ ವಿಮರ್ಶೆಗೆ ಒಳಗಾಗಿಲ್ಲ. ಕರ್ನಾಟಕದಲ್ಲಿ ಮುಸ್ಲಿಮರ ತಾತ್ವಿಕ ವಿಮರ್ಶೆಯ ಅನುಪಸ್ಥಿತಿ ಬಾನು ಬೆಳವಣಿಗೆಯನ್ನು ಸರಾಗವಾಗಿಸಿದೆ. ಒಂದೊಮ್ಮೆ ಮುಸ್ಲಿಮರು ತಾತ್ವಿಕ ನೆಲೆಗಟ್ಟಿನಲ್ಲಿ ಬಾನು ಸಾಹಿತ್ಯವನ್ನು ವಿಮರ್ಶಿಸುತ್ತಿದ್ದರೆ ಬಾನು ಲಂಕೇಶ್ ಪತ್ರಿಕೆಗಿಂತ ಆಚೆ ಬೆಳೆಯುತ್ತಿರಲಿಲ್ಲ ಎಂಬುದು ಸತ್ಯ. ಹೀಗಿದ್ದರೂ, ಮುಸ್ಲಿಮರ ಈ ವೀಕ್ನೆಸ್ ಬಳಸಿಕೊಂಡು, ಮುಸ್ಲಿಂ ಮಹಿಳೆಯರು ದಮನಿತರು ಎನ್ನುವ ಕೃತಕ ಕಥಾನಕ ಸೃಷ್ಟಿಸಿ, ಕಣ್ಣೀರು ಸುರಿಸಿ ಜಗತ್ತಿಗೆ ಅದನ್ನು ಯಶಸ್ವಿಯಾಗಿ ನಂಬಿಸಿ ಬಾನು ಸಾಹಿತ್ಯದಲ್ಲಿ ಬಾನೆತ್ತರಕ್ಕೆ ಬೆಳೆದ ಪರಿ ಮಾತ್ರ ಅನನ್ಯ..

ಕೊನೆಯದಾಗಿ, ಬಾನು ದಸರಾ ಚಾಲನೆ ಮಾಡುತ್ತಾರೆ ಎಂದು ಸಂಭ್ರಮಿಸುವ ಮುಸಲ್ಮಾನರಿಗೆ ಧಾರ್ಮಿಕತೆಯ ಬೇಸಿಕ್ ಸೆನ್ಸ್ ಕೂಡ ಇಲ್ಲ. ಅದನ್ನು ವಿರೋಧಿಸುವ ಮುಸ್ಲಿಮ್ ವಿರೋಧಿ ರಾಜಕಾರಣಿಗಳದ್ದು ತಮ್ಮ ಬೆಂಬಲಿಗರನ್ನು ಮಂಗ ಮಾಡುವ ಎಂದಿನ ಮುಸ್ಲಿಂ ವಿರೋಧಿ ಮ್ಯಾಟನೀ ಶೋ. ಬಹುದೇವಾರಾಧನೆಯಲ್ಲಿ ನಂಬಿಕೆ ಇಲ್ಲದವರು ದಸರಾ ಉದ್ಘಾಟಿಸುವುದು ಹಿಂದೂ ಧಾರ್ಮಿಕತೆಗೆ ವಿರುದ್ಧ. ಬಹುದೇವರಾಧನೆಯಲ್ಲಿ ನಂಬಿಕೆ ಇರಿಸುವುದು ಇಸ್ಲಾಮಿಕ್ ಧಾರ್ಮಿಕತೆಗೆ ವಿರುದ್ಧ. ಹೀಗಿದ್ದೂ ಮೌನದಿಂದ ಇದನ್ನೆಲ್ಲ ನೋಡುತ್ತಿರುವ ನಾಡಿನ ದೊಡ್ಡ ಜನಸಮುದಾಯದವರು ನೈಜ ಪ್ರಜ್ಞಾವಂತರು. ರಾಜಕೀಯದಲ್ಲಿ ಏನು ಬೇಕಾದರೂ ಆಗುತ್ತದೆ ಎನ್ನುವುದನ್ನು ಗಟ್ಟಿ ನಂಬಿದವರು. ಈ ಮಧ್ಯೆ, ಇಂಥ ಪೆದ್ದುಪೆದ್ದು ತೀರ್ಮಾನಗಳಿಂದಾಗಿ ಕಳೆದ ಬಾರಿಯ ಸಿದ್ದರಾಮಯ್ಯನವರ ಸರ್ಕಾರವನ್ನು ಟಿಪ್ಪು ನುಂಗಿದಂತೆ, ಈ ಬಾರಿ ಬಾನು ನುಂಗುವ ಸಾಧ್ಯತೆ ಇದೆ. ಸಿದ್ದರಾಮಯ್ಯನವರು ಮುಸ್ಲಿಮರನ್ನು ಓಲೈಸಲು ಇದನ್ನೆಲ್ಲ ಬಿಟ್ಟು ಬಾನು ಹೆಸರಿನಲ್ಲಿ ಒಂದು ಒಳ್ಳೆಯ ವಿಶ್ವವಿದ್ಯಾನಿಲಯ ಅಥವಾ ನಾಡಿನ ಎಲ್ಲಾ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಸ್ಕಾಲರ್ಶಿಪ್ ಘೋಷಿಸಲಿ..

ಪ್ರತಿಷ್ಠಿತ ಬರಹಗಾರ ಮತ್ತು ಲೇಖಕರಾದ ಮುಷ್ತಾಕ್ ಹೆನ್ನಬೈಲ್ ಅವರು ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾನ್ವಿತ ನಾಯಕರು. ಅವರು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಷಯಗಳ ಕುರಿತು ಆಳವಾದ ಬರಹಗಳನ್ನು ಮಾಡುತ್ತಾರೆ. ಅವರ ಇತ್ತೀಚಿನ ಕೃತಿ “ಧರ್ಮಾಧರ್ಮ” ಅನೇಕ ಓದುಗರ ಹೃದಯ ಗೆದ್ದಿದ್ದು, ಅಪಾರ ಗೌರವವನ್ನು ಪಡೆದಿದೆ.

ಮೇಲಿನ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ