ತಲಪಾಡಿ, ಆಗಸ್ಟ್ 31, 2025: ಆಗಸ್ಟ್ 28, 2025ರ ಮಧ್ಯಾಹ್ನ ತಲಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ, ಮಂಜೇಶ್ವರ ಪೊಲೀಸರು ಕರ್ನಾಟಕ ರಾಜ್ಯ ರಸ্তೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಚಾಲಕ, ಬಾಗಲಕೋಟೆಯ ಅಂಬೇಡ್ಕರ್ ನಗರ ನಿವಾಸಿ ನಿಜಲಿಂಗಪ್ಪ ಚಲವಾದಿ (47) ಅವರನ್ನು ಬಂಧಿಸಿದ್ದಾರೆ. ಬಂಧಿತ ಚಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, ರಿಕ್ಷಾ ಚಾಲಕ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಅಪಘಾತದ ಬಳಿಕ ಚಾಲಕ ಬಸ್‌ನಿಂದ ಇಳಿದು ಹೋದ ಕಾರಣ, ಇಳಿಜಾರು ರಸ্তೆಯಲ್ಲಿ ಬಸ್ ಹಿಮ್ಮುಖವಾಗಿ ಚಲಿಸಿ, ರಸ್ತೆ ಬದಿಯಲ್ಲಿ ನಿಂತಿದ್ದ ಪ್ರಯಾಣಿಕರು ಮತ್ತು ಮತ್ತೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್‌ನಲ್ಲಿ ಬ್ರೇಕ್ ವೈಫಲ್ಯ ಅಥವಾ ತಾಂತ್ರಿಕ ದೋಷವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೃಢಪಡಿಸಿದ್ದಾರೆ.
ಮೃತರ ಕುಟುಂಬಕ್ಕೆ ಪರಿಹಾರ: ಒಂದೇ ಕುಟುಂಬದ ಐವರ ಸೇರಿದಂತೆ ಆರು ಮಂದಿ ಮೃತರಾದ ಈ ದುರಂತದಲ್ಲಿ, ಮೃತರ ಕುಟುಂಬಗಳಿಗೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಸ್ಪೀಕರ್ ಯು.ಟಿ. ಖಾದರ್ ಸೂಚನೆಯಂತೆ ತಲಾ ಒಂದು ಲಕ್ಷ ರೂಪಾಯಿಯಂತೆ ಒಟ್ಟು ಆರು ಲಕ್ಷ ರೂಪಾಯಿ ಪರಿಹಾರವನ್ನು ಶುಕ್ರವಾರ ವಿತರಿಸಲಾಗಿದೆ. ಮೃತರಾದ ಆಟೋ ಚಾಲಕ ಹೈದರ್‌ರವರ ದೇಹವನ್ನು ಕಿನ್ಯ ಮೀನಾದಿಯಲ್ಲಿ, ನಫೀಸ ಅವರ ಅತ್ತೆಯ ದೇಹವನ್ನು ಫರಂಗಿಪೇಟೆ ಮಸೀದಿ ಬಳಿ, ಮತ್ತು ಖದೀಜ (60), ನಫೀಸ (52), ಆಯಿಷಾ ಪಿದಾ (19), ಹಸ್ನ (11) ಅವರ ದೇಹಗಳನ್ನು ಅಜ್ಜಿನಡ್ಕ ಮಸೀದಿಯಲ್ಲಿ ಮಯ್ಯತ್ ನಮಾಝ್ ನಂತರ ಕಲ್ಲಾಪು ಪಟ್ಲ ಬಳಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.
ಗಾಯಾಳುಗಳಾದ ಕಾಸರಗೋಡು ನಿವಾಸಿಗಳಾದ ಲಕ್ಷ್ಮೀ ಮತ್ತು ಅವರ ಪುತ್ರ ಸುರೇಂದ್ರರಿಗೆ ಚಿಕಿತ್ಸೆ ಮುಂದುವರಿದಿದೆ. ಅವರು ಸಂಬಂಧಿಕರ ಮನೆಗೆ ಭೇಟಿ ನೀಡಿ ಊರಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿತು. ಖದೀಜ ಮತ್ತು ನಫೀಸ ಸಹೋದರಿಯರಾಗಿದ್ದು, ಕುಂಜತ್ತೂರಿನ ತಮ್ಮ ಸಹೋದರಿ ಆಯಿಷಾ ಅವರ ಮನೆಗೆ ಹೈದರ್‌ರವರ ರಿಕ್ಷಾದಲ್ಲಿ ತೆರಳುತ್ತಿದ್ದರು. ಎಂಟು ವರ್ಷಗಳ ಹಿಂದೆ ಇದೇ ಕುಟುಂಬವು ಉಪ್ಪಳದಲ್ಲಿ ಸಂಭವಿಸಿದ ಮತ್ತೊಂದು ದುರಂತದಲ್ಲಿ ಏಳು ಮಂದಿಯನ್ನು ಕಳೆದುಕೊಂಡಿತ್ತು.
ಸ್ಪೀಕರ್ ಯು.ಟಿ. ಖಾದರ್, ಮಂಜೇಶ್ವರ ಶಾಸಕ ಅಶ್ರಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಹರ್ಷಾದ್ ವರ್ಕಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡ ಅಶ್ರಫ್, ಪದ್ಮರಾಜ್ ಪೂಜಾರಿ, ಕೋಟೆಕಾರ್ ಪ.ಪಂ. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಸೇರಿದಂತೆ ಗಣ್ಯರು, ಕುಟುಂಬಸ್ಥರು, ಸ್ಥಳೀಯರು, ಮತ್ತು ಸ್ನೇಹಿತರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.
ಉನ್ನತ ಮಟ್ಟದ ತನಿಖೆಗೆ ಸೂಚನೆ: ಯು.ಟಿ. ಖಾದರ್, ಸ್ಪೀಕರ್
ಸರ್ಕಾರಿ ಬಸ್‌ನಿಂದ ಈ ದುರಂತ ಸಂಭವಿಸಿರುವುದು ಗಂಭೀರ ವಿಷಯ. ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಚಾಲಕನ ತಪ್ಪು ಕಂಡುಬಂದರೆ, ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿ ಡಿಪೋಗೆ ಸೂಚಿಸಲಾಗಿದೆ. ಕೋರ್ಟ್ ಅದಾಲತ್ ನಡೆದ ಬಳಿಕ ಸರ್ಕಾರದಿಂದ ಹೆಚ್ಚುವರಿ ಪರಿಹಾರವನ್ನು ಮೃತರ ಕುಟುಂಬಗಳಿಗೆ ಒದಗಿಸಲಾಗುವುದು. ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂಬ ಆರೋಪವಿದೆಯಾದರೂ, ಘಟನೆಯನ್ನು ನೇರವಾಗಿ ನೋಡಿದವರಿಲ್ಲ. ಎಲ್ಲವನ್ನೂ ಸೂಕ್ತ ತನಿಖೆಯ ಮೂಲಕ ಖಾತರಿಪಡಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಉಸ್ಮಾನ್ ಅಲ್ತಾಫ್, ಅಧ್ಯಕ್ಷ, ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
ಬಸ್‌ನಲ್ಲಿ ಸವೆದ ಟೈರ್‌ಗಳು ಅಥವಾ ತಾಂತ್ರಿಕ ದೋಷಗಳಿದ್ದರೆ, ಅದು ಗಂಭೀರ ಅಪಾಯಕ್ಕೆ ಕಾರಣವಾಗಬಹುದು. ಖಾಸಗಿ ಬಸ್ ನೌಕರರ ಸಂಘದ ಪರವಾಗಿ, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಾಹನ ಮಾಲೀಕರು ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಟೈರ್, ಬ್ರೇಕ್ ಮತ್ತು ಇತರ ಮುಖ್ಯ ಭಾಗಗಳ ನಿರ್ವಹಣೆ ಅಗತ್ಯ. ಚಾಲಕರು ಮತ್ತು ನಿರ್ವಾಹಕರು ಯಾವುದೇ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಮಾಲೀಕರಿಗೆ ತಿಳಿಸಬೇಕು. ಈ ಘಟನೆ ಎಲ್ಲರಿಗೂ ಎಚ್ಚರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬಸ್‌ಗಳ ತಾಂತ್ರಿಕ ತಪಾಸಣೆಗೆ ಕಡ್ಡಾಯ ಕ್ರಮಗಳನ್ನು ತೆಗೆದುಕೊಂಡು, ಪ್ರಯಾಣಿಕರ ವಿಶ್ವಾಸವನ್ನು ಮರಳಿ ಗಳಿಸಲಾಗುವುದು.
ಕೆಎಸ್‌ಆರ್‌ಟಿಸಿಯಿಂದ ಆದೇಶ: ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಯ ಮೂಲಕವೇ ಕಡ್ಡಾಯವಾಗಿ ನಮೂನೆ-4ರಂತೆ ಕಾರ್ಯಾಚರಿಸಬೇಕು. ಆದರೆ, ಕೆಲವು ಚಾಲನಾ ಸಿಬ್ಬಂದಿ ಆದೇಶ ಉಲ್ಲಂಘಿಸಿ, ಸಂಚಾರ ನಿಯಮಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜನಸಂದಣಿ ಸ್ಥಳಗಳಲ್ಲಿ ಮತ್ತು ಅಪಘಾತ ವಲಯಗಳಲ್ಲಿ ಹೆಚ್ಚಿನ ಜಾಗ್ರತೆಯಿಂದ ಮಿತವೇಗದಲ್ಲಿ ವಾಹನ ಚಾಲನೆ ಮಾಡಬೇಕು. ಪ್ರಯಾಣಿಕರ ಬಾಗಿಲುಗಳನ್ನು ಮುಚ್ಚಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಮೇಲ್ವಿಚಾರಕರು ಈ ಆದೇಶಗಳ ಪಾಲನೆಯನ್ನು ಖಾತರಿಪಡಿಸಬೇಕು. ಸರ್ವೀಸ್ ರಸ್ತೆಯ ಮೂಲಕ ಕಾರ್ಯಾಚರಣೆಯನ್ನು ಪರಿಶೀಲಿಸಲು ಅಧಿಕಾರಿ/ಸಿಬ್ಬಂದಿ ತಂಡಗಳನ್ನು ರಚಿಸಲಾಗಿದೆ. ನಿಯಮ ಉಲ್ಲಂಘಿಸಿದ ಚಾಲನಾ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.