ಅಜೆಕಾರು: ಚೈನ್ ಕಳ್ಳತನ ಪ್ರಕರಣ; ಆರೋಪಿ ಬಂಧನ, ಚಿನ್ನ ವಶ

ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಾಡು ಎಳ್ಳಾರೆಯಲ್ಲಿ 80 ವರ್ಷದ ಮಹಿಳೆಯ ಚಿನ್ನದ ಚೈನ್ ಕಿತ್ತುಕೊಂಡು ಓಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ₹1,75,000 ಮೌಲ್ಯದ 25 ಗ್ರಾಂ ಚಿನ್ನದ ರೋಪ್ ಚೈನ್ ವಶಪಡಿಸಿಕೊಳ್ಳಲಾಗಿದೆ.

ಅಜೆಕಾರು: ಚೈನ್ ಕಳ್ಳತನ ಪ್ರಕರಣ; ಆರೋಪಿ ಬಂಧನ, ಚಿನ್ನ ವಶ

ಉಡುಪಿ, ಸೆ.12, 2025: ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಾಡು ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ (80) ಅವರ ಕುತ್ತಿಗೆಯಿಂದ 25 ಗ್ರಾಂ ಚಿನ್ನದ ರೋಪ್ ಚೈನ್ ಕಿತ್ತುಕೊಂಡು ಓಡಿದ ಆರೋಪಿ ಸುನಿಲ್ ರಮೇಶ್ ಲಮಾಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸೆಪ್ಟೆಂಬರ್ 9, 2025ರಂದು ಸಂಜೆ 4:30ರ ಸುಮಾರಿಗೆ ನಡೆದಿದೆ.

ಕುಮುದಾ ಶೆಟ್ಟಿ ಅವರು ತಮ್ಮ ಮನೆಯ ಅಂಗಳದಲ್ಲಿ ಕುಳಿತಿದ್ದಾಗ, 35-40 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಕಾರ್ಕಳದ ಸೂಪರ್‌ವೈಸರ್ ಎಂದು ಗುರುತಿಸಿಕೊಂಡು, “ಇಲ್ಲಿ ಹತ್ತಿರ ಮನೆ ಇದೆಯಾ, ಸಿಸಿ ಕ್ಯಾಮರಾ ಇದೆಯಾ” ಎಂದು ವಿಚಾರಿಸಿ, ಸ್ವಲ್ಪ ಸಮಯ ಕುಳಿತಿದ್ದಾನೆ. ಸಂಜೆ 6:00 ಗಂಟೆಗೆ ಆತ ಒಮ್ಮೆಲೇ ಕುಮುದಾ ಅವರ ಕುತ್ತಿಗೆಗೆ ಕೈಹಾಕಿ, ಆಕೆಯನ್ನು ನೆಲಕ್ಕೆ ತಳ್ಳಿ, ₹1,75,000 ಮೌಲ್ಯದ 25 ಗ್ರಾಂ ಚಿನ್ನದ ರೋಪ್ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ದಾಳಿಯಿಂದ ಕುಮುದಾ ಅವರ ಹಣೆ, ತಲೆ, ಬಲ ಕೈ ಮತ್ತು ಕಾಲಿಗೆ ಗಾಯಗಳಾಗಿವೆ.

ಸ್ಥಳಕ್ಕೆ ಬಂದ ಸತೀಶ್ ಪೂಜಾರಿ ಅವರು ಕುಮುದಾ ಶೆಟ್ಟಿ ಅವರನ್ನು ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 27/2025, ಕಲಂ 329(3), 309(4) BNS 2023ರಂತೆ ಪ್ರಕರಣ ದಾಖಲಾಗಿದೆ.

ಕಾರ್ಕಳ ಸಿಪಿಐ ಡಿ. ಮಂಜಪ್ಪ ನೇತೃತ್ವದಲ್ಲಿ, ಅಜೆಕಾರು ಪಿಎಸ್‌ಐ ಮಹೇಶ್ ಮತ್ತು ಸಿಬ್ಬಂದಿಗಳ ತಂಡ ಆರೋಪಿ ಸುನಿಲ್ ರಮೇಶ್ ಲಮಾಣಿ (29, ಗೊರವನಕೊಳ್ಳ, ಸವದತ್ತಿ ತಾಲೂಕು, ಬೆಳಗಾವಿ) ಎಂಬಾತನನ್ನು ಬಂಧಿಸಿ, ಕಳವಾದ ಚಿನ್ನದ ಚೈನ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ