ಉಡುಪಿ, ಸೆಪ್ಟೆಂಬರ್ 20, 2025: ಉಡುಪಿ ನಗರದ ಚಿತ್ತರಂಜನ್ ವೃತ್ತದಲ್ಲಿ ಚಿನ್ನ ಕರಗಿಸುವ ಅಂಗಡಿಯ ಶಟರ್ ಬಾಗಿಲಿನ ಬೀಗವನ್ನು ನಕಲಿ ಕೀ ಬಳಸಿ 95 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಮತ್ತು ನಗದು ಕಳ್ಳತನ ಮಾಡಿದ ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಬಂಧಿಸಿ, ಕಳ್ಳತನಕ್ಕೆ ಸಂಬಂಧಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು: ಸೋಲಾಪುರದ ಶುಭಂ ತಾನಾಜಿ ಸಾಥೆ (25), ಪ್ರವೀಣ್ ಅಪ್ಪ ಸಾಥೆ, ನಿಲೇಶ್ ಬಾಪು ಕಸ್ತೂರಿ, ಸಾಗರ್ ದತ್ತಾತ್ರೇಯ ಕಂಡಗಾಲೆ (32), ಮತ್ತು ಬಾಗವ ರೋಹಿತ್ ಶ್ರೀಮಂತ್ (25). ಸೆಪ್ಟೆಂಬರ್ 12ರಂದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್‌ಶಿರಸ್ ತಾಲೂಕು ನಿಮ್‌ಗಾಂವ್‌ನಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳಿಂದ 748.8 ಗ್ರಾಂ ಚಿನ್ನ (ಮೌಲ್ಯ: 74,88,000 ರೂ.), 4 ಕೆ.ಜಿ 445 ಗ್ರಾಂ ಬೆಳ್ಳಿ (ಮೌಲ್ಯ: 3,60,000 ರೂ.), ನಗದು 5,00,000 ರೂ., ಮತ್ತು ಮಾರುತಿ ಸ್ವಿಫ್ಟ್ ಕಾರು (ಮೌಲ್ಯ: 4,00,000 ರೂ.) ಸಹಿತ ಒಟ್ಟು 87,48,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.