ಉಡುಪಿ, ಸೆಪ್ಟೆಂಬರ್ 18, 2025: ಲಿಂಗಾಯತ ಧರ್ಮವು ಸನಾತನ ಧರ್ಮದ ಭಾಗವಲ್ಲ, ಬದಲಿಗೆ ವರ್ಣ-ಜಾತಿ ವ್ಯವಸ್ಥೆಯ ವಿರುದ್ಧ ಹುಟ್ಟಿಕೊಂಡ ಸ್ವತಂತ್ರ ಧರ್ಮವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ. ಉಡುಪಿಯ ಪುರಭವನದಲ್ಲಿ (ಟೌನ್‌ಹಾಲ್) ಗುರುವಾರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ಆಯೋಜಿತ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗಿನ ವಚನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಲಿಂಗಾಯತ ಎನ್ನುವುದು ಜಾತಿಯಲ್ಲ, ಒಂದು ಪರಿಪೂರ್ಣ ಧರ್ಮ. ಜಾತಿಯ ಕತ್ತಲನ್ನು ದೂರಮಾಡಲು ಧರ್ಮದ ಬೆಳಕಿನ ಅವಶ್ಯಕತೆ ಇದೆ. ಲಿಂಗಾಯತ ಧರ್ಮವು ಸಮಾಜದ ಬೇಧ-ಭಾವಗಳನ್ನು ಒಡೆದು, ಸಮಾನತೆಯನ್ನು ಒಡಮೂಡಿಸುವ ಧರ್ಮವಾಗಿದೆ” ಎಂದು ಡಾ. ಬಸವಲಿಂಗ ಪಟ್ಟದ್ದೇವರು ಸ್ಪಷ್ಟಪಡಿಸಿದರು.
ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, “ಸಿಖ್ಖ್, ಜೈನ್ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೂ ಸಂವಿಧಾನಿಕ ಮಾನ್ಯತೆ ಕೇಳುತ್ತಿದ್ದೇವೆ. ಇದು ಹೋರಾಟವಲ್ಲ, ನಮ್ಮ ಹಕ್ಕು. ಬಸವಣ್ಣರೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ. ಲಿಂಗಾಯತ ಧರ್ಮವು ಯಾವುದೇ ಇತರ ಧರ್ಮದ ಭಾಗವಲ್ಲ, ಇದು ಸ್ವತಂತ್ರ ಧರ್ಮ” ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಹುಲಸೂರು ಶ್ರೀಮಠದ ಶ್ರೀ ಶಿವನಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಧಾರವಾಡ ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಕಲಬುರ್ಗಿ ಷಣ್ಮುಖ ಶಿವಯೋಗಿಗಳ ಮಠದ ಶ್ರೀ ವೀರಸಿದ್ಧ ದೇವರು, ರಾಯಚೂರು ಶ್ರೀ ವೀರಭದ್ರ ಶಾಸ್ತ್ರಿಗಳು, ಬೆಳಗಾವಿ ಶ್ರೀ ಶಿವಬಸವ ದೇವರು, ಬಸವಕಲ್ಯಾಣದ ಶ್ರೀ ಬಸವರಾಜ ದೇವರು, ಮಮ್ಮಿಗಟ್ಟಿಯ ಬಸವನಂದ ಸ್ವಾಮೀಜಿ ಭಾಗವಹಿಸಿದರು. ಬೆಳಗಾವಿ ಸೆಗುಣಿಸೆಯ ಶ್ರೀ ಡಾ. ಮಹಾಂತ ಪ್ರಭು ಸ್ವಾಮೀಜಿ ಸಂವಾದದ ಸಮನ್ವಯಕರಾಗಿ ಸಹಕರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲೆ ಗೌರವಾಧ್ಯಕ್ಷ ಡಾ. ಜಿ.ಎಸ್. ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷ ನಿರಂಜನ ಚೋಳಯ್ಯ, ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ದಸಂಸ ಮುಖಂಡ ಸುಂದರ್ ಮಾಸ್ಟರ್, ಬಿಲ್ಲವ ಮುಖಂಡೆ ಗೀತಾಂಜಲಿ ಸುವರ್ಣ ಸೇರಿದಂತೆ ಅನೇಕರು ಸಂವಾದದಲ್ಲಿ ಭಾಗವಹಿಸಿದರು.