ಉಡುಪಿ, ಸೆಪ್ಟೆಂಬರ್ 20, 2025: ವಿಶ್ವದಾದ್ಯಂತ ಆಚರಿಸಲಾಗುವ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನದ ಅಂಗವಾಗಿ, ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಸೇರಿದಂತೆ ವಿವಿಧ ಕಡಲತೀರಗಳಲ್ಲಿ ಶನಿವಾರ ವ್ಯಾಪಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಮಾಹೆ ವಿಶ್ವವಿದ್ಯಾಲಯ, ಕೆನರಾ ಬ್ಯಾಂಕ್, ಕರಾವಳಿ ಕಾವಲು ಪಡೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಲ್ಪೆ, ಕಾಪು ಬ್ಲೂ ಫ್ಲಾಗ್ ಬೀಚ್, ಡೆಲ್ಟಾ ಬೀಚ್, ಕೋಡಿ, ತ್ರಾಸಿ-ಮರವಂತೆ, ಮತ್ತು ಬೈಂದೂರಿನ ಸೋಮೇಶ್ವರ ಬೀಚ್‌ಗಳಲ್ಲಿ ಏಕಕಾಲದಲ್ಲಿ ಸ್ವಚ್ಚತಾ ಅಭಿಯಾನ ಆಯೋಜಿಸಲಾಗಿತ್ತು.

ಮಲ್ಪೆ ಕಡಲತೀರದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ನೇತೃತ್ವದಲ್ಲಿ ಸರಕಾರಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಮತ್ತು ಸಂಘಟನೆಗಳ ಸದಸ್ಯರು ಕಸ ಸಂಗ್ರಹಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಪರಿಸರ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿ, ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಪ್ರಮಾಣವಚನ ಬೋಧಿಸಿದರು. “ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ಇದಕ್ಕೆ ಎಲ್ಲರೂ ಆದ್ಯತೆ ನೀಡಬೇಕು” ಎಂದು ಅವರು ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಗಂಗಾಧರ್, ಮಾಹೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ನಗರಸಭೆಯ ಸ್ವಚ್ಚತಾಕರ್ಮಿಗಳು, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.