ಉಡುಪಿ

ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕ್ರಮಕ್ಕೆ ಉಡುಪಿ ಸಹಬಾಳ್ವೆ ಆಗ್ರಹ

ಉಡುಪಿ, ಆಗಸ್ಟ್ 26, 2025: ಶಾಸಕ ಯಶ್ಪಾಲ್ ಸುವರ್ಣರ ಭಯೋತ್ಪಾದಕ ಹೇಳಿಕೆಗೆ ಖಂಡನೆ; ಸಾಂವಿಧಾನಿಕ ಕ್ರಮಕ್ಕೆ ಉಡುಪಿ ಸಹಬಾಳ್ವೆ ಒತ್ತಾಯ. ಯೂಟ್ಯೂಬರ್ ಸಮೀರ್ ವಿರುದ್ಧ ಮಾತಿನಿಂದ ಸಂವಿಧಾನಕ್ಕೆ ಅವಮಾನ ಎಂದು ಆರೋಪ.

ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕ್ರಮಕ್ಕೆ ಉಡುಪಿ ಸಹಬಾಳ್ವೆ ಆಗ್ರಹ

ಉಡುಪಿ, ಆಗಸ್ಟ್ 26, 2025: ತಮ್ಮ ಶಾಸಕ ಸ್ಥಾನದ ಸಂವಿಧಾನಿಕ ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣರ ನಡೆಗೆ ತೀವ್ರ ಖಂಡನೀಯ. ಅವರ ಮೇಲೆ ಕಠಿಣ ಸಾಂವಿಧಾನಿಕ ಕ್ರಮ ಜರುಗಿಸಬೇಕೆಂದು ಉಡುಪಿ ಸಹಬಾಳ್ವೆ ಸಂಘಟನೆಯು ಕರ್ನಾಟಕ ವಿಧಾನಸಭಾಧ್ಯಕ್ಷರನ್ನು ಒತ್ತಾಯಿಸಿದೆ.

ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳು ತಾವು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂಬ ಪ್ರಮಾಣ ಮಾಡಿದ ಮೇಲಷ್ಟೇ ತಮ್ಮ ಸಂವಿಧಾನಿಕ ಸ್ಥಾನಕ್ಕೆ ಅರ್ಹರಾಗುತ್ತಾರೆ. ಹಾಗೆ ಪ್ರಮಾಣವಚನಗೈದು, ಸಂವಿಧಾನ ವಿರುದ್ಧ ನಡಾವಳಿ ತೋರಿದರೆ, ಅಂತಹವರು ಖಂಡಿತಕ್ಕೂ ತಮ್ಮ ಸ್ಥಾನಕ್ಕೆ ಅನರ್ಹರಾಗುತ್ತಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸದಾ ತಮ್ಮ ಸಾಂವಿಧಾನಿಕ ಸ್ಥಾನದ ಹದ್ದು ಮೀರಿ ವರ್ತಿಸುವ ಚಾಳಿ ಬೆಳಸಿಕೊಂಡಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಅವರು ಸಾಮಾಜಿಕ ಶಾಂತಿ ಸೌಹಾರ್ದ ಕದಡುವಂತಹ ವರ್ತನೆಗಳನ್ನು ತೋರುತ್ತಲೇ ಬಂದಿದ್ದಾರೆ. ಆದರೆ ಆ.24ರಂದು ಅವರು ತಮ್ಮ ಶಾಸಕ ಸ್ಥಾನದ ಮರ್ಯಾದೆಯನ್ನು ಗಾಳಿಗೆ ತೂರಿ, ಅಪ್ಪಟ ರೌಡಿಯಂತೆ ವರ್ತಿಸಿದ್ದಾರೆ. ಯೂಟ್ಯುಬರ್ ಸಮೀರ್ ಎಂ.ಡಿ. ಕುರಿತು ಮಾಧ್ಯಮಗಳ ಮುಂದೆ ’ಆತ ಉಡುಪಿಗೆ ಬಂದಿದ್ದರೆ ಮಲ್ಪೆ ಬೀಚಲ್ಲಿ ಆತನನ್ನು ಫುಟ್ಬಾಲ್ ಆಡುತ್ತಿದ್ದೆವು. ಯಾವ ಸರಕಾರವಿದ್ದರೂ ಸರಿ, ಆತನಿಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ’ ಎಂಬ ಭಯೋತ್ಪಾದಕ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಗರಿಕನೂ ಈ ಬಗೆಯ ವರ್ತನೆ ತೋರುವುದು ಅಪರಾಧವಾಗಿದೆ. ಅದರಲ್ಲೂ ಸಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಯು ಈ ಬಗೆಯಲ್ಲಿ ವರ್ತಿಸುವುದು ಅಕ್ಷಮ್ಯ ಅಪರಾಧವಾಗಿದೆ. ಈ ವರ್ತನೆಯ ಮೂಲಕ ಅವರು ಸಂವಿಧಾನಕ್ಕೂ, ಅವರು ಪ್ರತಿನಿಧಿಸುವ ಕ್ಷೇತ್ರದ ಪ್ರಜೆಗಳಿಗೂ ಅವಮಾನ ಮಾಡಿದ್ದಾರೆ. ಇಂತಹ ವ್ಯಕ್ತಿಗಳು ಸಂವಿಧಾನಿಕ ಸ್ಥಾನದಲ್ಲಿ ಯಾವ ಕಾರಣಕ್ಕೂ ಮುಂದುವರಿಯಬಾರದು ಸಹಬಾಳ್ವೆ ಹೇಳಿದೆ.

ವಿಧಾನಸಭಾ ಸ್ಪೀಕರ್ ತಕ್ಷಣವೇ, ತಮ್ಮ ಸ್ಥಾನದ ಪರಮಾಧಿಕಾರ ಪ್ರಯೋಗಿಸಿ, ಯಶ್ಪಾಲ್ ಸುವರ್ಣರ ಮೇಲೆ ದಂಡನಾ ಕ್ರಮ ಕೈಗೊಳ್ಳಬೇಕೆಂದು ಸಹಬಾಳ್ವೆ ಉಡುಪಿ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ