ಉಡುಪಿ, ಸೆಪ್ಟೆಂಬರ್ 10, 2025: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ 1500ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಉಡುಪಿ ಜಿಲ್ಲೆಯ 10 ಸುನ್ನೀ ಸಂಘಟನೆಗಳ ಒಕ್ಕೂಟವಾದ ಜಿಲ್ಲಾ ಸುನ್ನೀ ಕೋ-ಆರ್ಡಿನೇಷನ್ ಸಮಿತಿಯಿಂದ ಸೆಪ್ಟೆಂಬರ್ 13, 2025ರ ಶನಿವಾರ ಉಡುಪಿ ನಗರದಲ್ಲಿ ಬೃಹತ್ ಮೀಲಾದ್ ಜಾಥಾ ಆಯೋಜಿಸಲಾಗಿದೆ. ಈ ಕುರಿತು ಸಮಿತಿಯ ಅಧ್ಯಕ್ಷ ಕೆ.ಎ. ಅಬ್ದುರ‌್ರಹಮಾನ್ ರಝ್ವಿ ಕಲ್ಕಟ್ಟ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೆ.13ರಂದು ಮಧ್ಯಾಹ್ನ 2:30ಕ್ಕೆ ಉಡುಪಿ ಅಂಜುಮನ್ ಮಸೀದಿಯಲ್ಲಿ ಮೌಲಿದ್ ಮಜ್ಲಿಸ್ ಪಾರಾಯಣ ನಡೆಯಲಿದ್ದು, ಬಳಿಕ 3:30ಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ಅಂಜುಮನ್ ಮಸೀದಿಯಿಂದ ಆರಂಭವಾಗಿ, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಕೋರ್ಟ್ ರಸ್ತೆ ಮೂಲಕ ಸಾಗಿ, ಅಜ್ಜರಕಾಡಿನ ಹುತಾತ್ಮ ಭವನದ ಬಳಿ ಸಮಾರೋಪಗೊಳ್ಳಲಿದೆ. ಆಧ್ಯಾತ್ಮಿಕ ನಾಯಕರಾದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್, ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಬಿ.ಎ. ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಸಹಾಯಕ ಕಾಝಿ ಅಬ್ದುರ‌್ರಹ್ಮಾನ್ ಮದನಿ ಮೂಳೂರು, ಮತ್ತು ಹಫೀಝೇ ಮಿಲ್ಲತ್ ಅಕಾಡೆಮಿ ಜಿಲ್ಲಾಧ್ಯಕ್ಷ ಮೌಲಾನಾ ಶೌಕತ್ ರಝ್ವಿ ಶಾಂತಿನಗರ ಮೌಲಿದ್ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ.
ಜಾಥಾದ ಧ್ವಜವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ ತಂಳ್ ರಂಗಿನಕೆರೆ ಅವರು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಜಿಲ್ಲಾಧ್ಯಕ್ಷರಿಗೆ ಹಸ್ತಾಂತರಿಸಲಿದ್ದಾರೆ. ಜಾಥಾದ ಸಮಾರೋಪ ಕಾರ್ಯಕ್ರಮ ಅಜ್ಜರಕಾಡಿನ ಹುತಾತ್ಮ ಚೌಕದಲ್ಲಿ ನಡೆಯಲಿದ್ದು, ಮೌಲಾನಾ ಮುಫ್ತಿ ಬದ್ರುದ್ದೀನ್ ಮಿಸ್ಬಾಹೀ ಕಾರ್ಕಳ ಮತ್ತು ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ಸಂದೇಶ ಭಾಷಣ ಮಾಡಲಿದ್ದಾರೆ. ಸುಮಾರು 5,000 ಜನರು ಜಾಥಾ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಜಾಥಾದಲ್ಲಿ ಅತ್ಯಾಕರ್ಷಕ ದಫ್ ಪ್ರದರ್ಶನ, ಸ್ಕೌಟ್‌ಗಳ ಜೊತೆಗೆ ಜಿಲ್ಲೆಯ ಉನ್ನತ ಉಲಮಾ, ಸಾದಾತುಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. “ಈ ಜಾಥಾ ಶಾಂತಿಯ ಸಂದೇಶವನ್ನು ಸಾರಲಿದ್ದು, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು,” ಎಂದು ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ಅಸ્સಯ್ಯಿದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ, ಹಫೀಝೇ ಮಿಲ್ಲತ್ ಅಕಾಡೆಮಿ ಜಿಲ್ಲಾಧ್ಯಕ್ಷ ಮೌಲಾನಾ ಶೌಕತ್ ರಝ್ವಿ ಶಾಂತಿನಗರ, ಸ್ವಾಗತ ಸಮಿತಿಯ ಸಂಚಾಲಕರಾದ ಅಬ್ದುಲ್ ವಹೀದ್ ಅಂಜುಮನ್ ಮತ್ತು ಉಮರ್ ಫಾರೂಖ್ ಆರ್.ಕೆ. ಉಪಸ್ಥಿತರಿದ್ದರು.