ಉಡುಪಿ

ಕರ್ತವ್ಯಲೋಪ ಆರೋಪ: ಉಡುಪಿ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದಲಿತ ಹಕ್ಕುಗಳ ಸಮಿತಿಯಿಂದ ದೂರು

ಉಡುಪಿ, ಆಗಸ್ಟ್ 29, 2025: ಉದ್ಯಾವರದ ಪಿತ್ರೋಡಿಯಲ್ಲಿ ದಲಿತ ಕುಟುಂಬದ ರಸ್ತೆ ಒತ್ತುವರಿಯನ್ನು ತೆರವುಗೊಳಿಸದ ಉಡುಪಿ ತಹಶೀಲ್ದಾರ್ ವಿರುದ್ಧ ಕರ್ತವ್ಯಲೋಪ ಆರೋಪ; ದಲಿತ ಹಕ್ಕುಗಳ ಸಮಿತಿಯ ಸಂಜೀವ ಬಳ್ಕೂರು ಜಿಲ್ಲಾಧಿಕಾರಿಗೆ ದೂರು. ಬೈಂದೂರಿನ ದಲಿತರಿಗೆ ಜಮೀನು ಮಂಜೂರಾತಿಗೆ ಒತ್ತಾಯ.

ಕರ್ತವ್ಯಲೋಪ ಆರೋಪ: ಉಡುಪಿ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದಲಿತ ಹಕ್ಕುಗಳ ಸಮಿತಿಯಿಂದ ದೂರು

ಉಡುಪಿ, ಆಗಸ್ಟ್ 29, 2025: ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಪಿತ್ರೋಡಿಯಲ್ಲಿ ದಲಿತ ಕುಟುಂಬದ ಮನೆಗೆ ತೆರಳುವ ಸರಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ತಾಲೂಕು ಮೋಜಣಿದಾರರು ಒತ್ತುವರಿಯನ್ನು ಖಚಿತಪಡಿಸಿ ನಕ್ಷೆ ಸಹಿತ ವರದಿ ಸಲ್ಲಿಸಿದ್ದರೂ, ಒತ್ತುವರಿಯನ್ನು ತೆರವುಗೊಳಿಸದೆ ಮುಕ್ತ ಸಂಚಾರಕ್ಕೆ ಪ್ರತಿಬಂಧಕವಾಗಿ ದಲಿತ ದೌರ್ಜನ್ಯವನ್ನು ಎಸಗಿದ ಆರೋಪದಲ್ಲಿ ಉಡುಪಿ ತಹಶೀಲ್ದಾರ್ ಗಂಭೀರ ಕರ್ತವ್ಯಲೋಪ ಎಸಗಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ದೂರು ಸಲ್ಲಿಸಿದ್ದಾರೆ.

ಬೈಂದೂರು ತಾಲೂಕಿನ ನಾಡ ಗ್ರಾಮದಲ್ಲಿ ದಶಕಗಳಿಂದ ಸರಕಾರಿ ಜಮೀನು ಮಂಜೂರಾಗದೆ ಸಂಕಷ್ಟ ಅನುಭವಿಸುತ್ತಿರುವ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಲಭ್ಯವಿರುವ ಸರಕಾರಿ ಜಮೀನಿನಲ್ಲಿ ಶೇ. 50 ರಷ್ಟನ್ನು ದಲಿತರಿಗೆ ಮೀಸಲಿಡುವಂತೆ ಸಂಜೀವ ಬಳ್ಕೂರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್, ಬೈಂದೂರು ವಲಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮುಖಂಡರಾದ ನಾಗರತ್ನ ನಾಡ, ರಂಗನಾಥ ಕೊರಂಗರಪಾಡಿ, ನಾಗರತ್ನ ಆರ್., ಮತ್ತು ನಾಡ ಗ್ರಾಮದ ಭೂರಹಿತ ದಲಿತ ಮಹಿಳೆಯರು ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ