ಉಡುಪಿ, ಸೆಪ್ಟೆಂಬರ್ 18, 2025: ಸೈಂಟ್ ಸಿಸಿಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು ಸೆಪ್ಟೆಂಬರ್ 24ರಂದು ಬೆಹರೆನ್ ಕನ್ನಡ ಸಂದರ್ಭದಲ್ಲಿ 1 ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ತಂದೆ ಉದಯ್‌ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಸಾಧನೆಯ ಬಗ್ಗೆ ತಿಳಿಸಿದರು.
2023ರಲ್ಲಿ 45 ನಿಮಿಷಗಳಲ್ಲಿ 245 ಯೋಗಾಸನಗಳ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದ ತನುಶ್ರೀ, ಈಗ ತನ್ನದೇ ದಾಖಲೆಯನ್ನು ಮುರಿದು ವಿದೇಶದಲ್ಲಿ ಮೊದಲ ಸಾಧನೆಯನ್ನು ಸಾಧಿಸಲು ಅಣಿಯಾಗಿದ್ದಾರೆ. ಯೋಗಾಸನ ಪ್ರದರ್ಶನದಲ್ಲಿ ಭಾರತೀಯ ರಾಯಭಾರಿ ವಿನೋದ್ ಚಾಕೋಬ್ ಭಾಗವಹಿಸಲಿದ್ದಾರೆ.
ಬೆಹರೆನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ್, “ಕರಾವಳಿಯ ಹಲವು ಪ್ರತಿಭೆಗಳನ್ನು ಕರೆಸಿ, ಅವರಿಗೆ ಗೌರವ ಸಲ್ಲಿಸಿದ್ದೇವೆ” ಎಂದು ಹೇಳಿದರು. ಕುರ್ಕಾಳು ಗ್ರಾಪಂ ಸದಸ್ಯ ಪ್ರವೀಣ್ ಕುಮಾರ್ ಕುರ್ಕಾಳ್ ಮತ್ತು ತನುಶ್ರೀ ಪಿತ್ರೋಡಿ ಉಪಸ್ಥಿತರಿದ್ದರು.