ಉಡುಪಿ, ಆಗಸ್ಟ್ 30, 2025: ಉಡುಪಿಯ ವಿದುಷಿ ದೀಕ್ಷಾ ವಿ. ಅವರು 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ, ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಅವರು 170 ಗಂಟೆಗಳ ಹಿಂದಿನ ದಾಖಲೆಯನ್ನು ಮೀರಿಸಿದ್ದಾರೆ.
ಆಗಸ್ಟ್ 21ರಂದು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾದ ಈ ವಿಶ್ವದಾಖಲೆ ನಿರ್ಮಾಣ ಪ್ರದರ್ಶನ, ಒಟ್ಟು 9 ದಿನಗಳು ನಿರಂತರವಾಗಿ ನಡೆದಿದ್ದು, 216 ಗಂಟೆಗಳವರೆಗೆ ಮುಂದುವರಿಯಿತು.
ಬ್ರಹ್ಮಾವರ ತಾಲೂಕಿನ ಮುಂಡಿಂಜಿಡ್ಡು ಮೂಲದ ದೀಕ್ಷಾ ವಿ. ಅವರಿಗೆ ಭರತನಾಟ್ಯ ಕ್ಷೇತ್ರದಲ್ಲಿ ಅತಿ ಎತ್ತರ ತಲುಪುವ ಕನಸಿತ್ತು. ಅದೇ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಅವರು 216 ಗಂಟೆಗಳ ನಿರಂತರ ನೃತ್ಯ ಪ್ರದರ್ಶನಕ್ಕೆ ಕೈಹಾಕಿದರು.
ಆಗಸ್ಟ್ 28ರಂದು ಸಂಜೆ 5:30ಕ್ಕೆ ಅವರು 170 ಗಂಟೆಗಳ ಪ್ರದರ್ಶನ ಪೂರೈಸಿ, ಮಂಗಳೂರು ಮೂಲದ ರೆಮೊನಾ ಇವೆಟ್ ಪೆರೇರಾ (170 ಗಂಟೆ) ನಿರ್ಮಿಸಿದ್ದ ದಾಖಲೆ ಮುರಿದರು. ರೆಮೊನಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದರು.
ಈ ದಾಖಲೆ ನಿರ್ಮಾಣ ಪ್ರಯತ್ನಕ್ಕೆ ರತ್ನ ಸಂಜೀವ ಕಲಾಮಂಡಲ, ಮಣಿಪಾಲ ಸಂಸ್ಥೆಯ ಬೆಂಬಲ ದೊರೆತಿದ್ದು, ಮಹೇಶ್ ಠಾಕೂರ್ ಅವರ ನೇತೃತ್ವದಲ್ಲಿ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ನಡೆದಿತ್ತು.
ಹೆಚ್ಚಿನ ವಿವರಗಳು ನಿರೀಕ್ಷೆಯಲ್ಲಿವೆ.