ಉಳ್ಳಾಲ, ಸೆಪ್ಟೆಂಬರ್ 15, 2025: ಹಠಾತ್ ಇಂಜಿನ್ ಆಫ್ ಆಗಿ ನಿಯಂತ್ರಣ ಕಳೆದುಕೊಂಡ ಮೀನುಗಾರಿಕಾ ಬೋಟ್ ಒಂದು ಉಳ್ಳಾಲ ಸೀಗ್ರೌಂಡ್ ಬಳಿಯ ಕಲ್ಲು ಬಂಡೆಗಳಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆಯು ಇಂದು ಮುಂಜಾನೆ ನಡೆದಿದ್ದು, ಬೋಟ್‌ನಲ್ಲಿದ್ದ 13 ಮಂದಿ ಮೀನುಗಾರರು ಈಜಿಕೊಂಡು ದಂಡೆ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೋಟ್ ಸಂಪೂರ್ಣ ಹಾನಿಗೊಳಗಾಗಿ, ಮೀನಿನ ಬಲೆಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸುಮಾರು 1.5 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ.

ಅಶ್ಫಾಕ್ ಅವರ ಮಾಲಕತ್ವದ ‘ಬುರಖ್’ ಹೆಸರಿನ ಬೋಟ್ ಮಂಗಳೂರಿನ ಧಕ್ಕೆಯಿಂದ ಇಂದು ಮುಂಜಾನೆ 2:30 ಗಂಟೆಗೆ 13 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಉಳ್ಳಾಲ ಸೀಗ್ರೌಂಡ್ ಬಳಿಯಲ್ಲಿ ಇಂಜಿನ್ ಹಠಾತ್ ಆಫ್ ಆಗಿ ನಿಯಂತ್ರಣ ಕಳೆದುಕೊಂಡ ಬೋಟ್, ತೀರದ ಕಡಲ್ಕೊರೆತಕ್ಕೆ ತಾತ್ಕಾಲಿಕ ತಡೆಯಾಗಿ ಹಾಕಲಾಗಿರುವ ಕಲ್ಲು ಬಂಡೆಗಳಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆಯಿತು. ಚಾಲಕ ಸೇರಿದಂತೆ ಎಲ್ಲರೂ ಈಜಿಕೊಂಡು ಸುರಕ್ಷಿತವಾಗಿ ದಂಡೆ ಸೇರಿದ್ದಾರೆ ಎಂದು ಬೋಟ್‌ನ ವ್ಯವಸ್ಥಾಪಕ ಖಲೀಲ್ ಅವರು ಹೆಡ್‌ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಘಟನೆಯಿಂದ ಬೋಟ್ ಸಂಪೂರ್ಣ ನಾಶಗೊಂಡಿದ್ದು, ಮೀನಿನ ಬಲೆಗಳು, ಇಂಧನ ಮತ್ತು ಇತರ ಬೆಲೆಬಾಹು ಸಾಮಗ್ರಿಗಳ ನಷ್ಟ ಸೇರಿದಂತೆ ಒಂದೂವರೆ ಕೋಟಿಗೂ ಹೆಚ್ಚು ಹಣದ ನಷ್ಟ ಉಂಟಾಗಿದೆ. ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.