ಯಲ್ಲಾಪುರ: ಕಿರವತ್ತಿಯಲ್ಲಿ ಮರ ಕುಸಿದು ಗರ್ಭಿಣಿ, ವಿದ್ಯಾರ್ಥಿನಿ ಸಾವು; ಮೂವರು ಮಕ್ಕಳಿಗೆ ಗಂಭೀರ ಗಾಯ

ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಡೊಮಗೇರಿಯಲ್ಲಿ ಮರ ಕುಸಿದು ಬಿದ್ದ ದುರಂತದಲ್ಲಿ ಐದು ತಿಂಗಳ ಗರ್ಭಿಣಿ ಸಾವಿತ್ರಿ ಬಾಗು ಖರಾತ್ (28) ಮತ್ತು ವಿದ್ಯಾರ್ಥಿನಿ ಸ್ವಾತಿ ಬಾಬು ಖರಾತ್ (17) ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಯಲ್ಲಾಪುರ: ಕಿರವತ್ತಿಯಲ್ಲಿ ಮರ ಕುಸಿದು ಗರ್ಭಿಣಿ, ವಿದ್ಯಾರ್ಥಿನಿ ಸಾವು; ಮೂವರು ಮಕ್ಕಳಿಗೆ ಗಂಭೀರ ಗಾಯ

ಯಲ್ಲಾಪುರ, ಸೆಪ್ಟೆಂಬರ್ 08, 2025: ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಡೊಮಗೇರಿಯಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ, ಮರ ಕುಸಿದು ಬಿದ್ದ ಪರಿಣಾಮ ಐದು ತಿಂಗಳ ಗರ್ಭಿಣಿ ಸಾವಿತ್ರಿ ಬಾಗು ಖರಾತ್ (28) ಮತ್ತು ವಿದ್ಯಾರ್ಥಿನಿ ಸ್ವಾತಿ ಬಾಬು ಖರಾತ್ (17) ಮೃತಪಟ್ಟಿದ್ದಾರೆ.

ಸಾವಿತ್ರಿ ಅವರು ಅಂಗನವಾಡಿಯಿಂದ ಹಿಂದಿರುಗುತ್ತಿದ್ದಾಗ ದಿಢೀರ್ ಮರ ಕುಸಿದು ಅವರ ಮೇಲೆ ಬಿದ್ದಿದೆ. ಈ ದುರಂತದಲ್ಲಿ ಸಾವಿತ್ರಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಸ್ವಾತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾಳೆ.

ಈ ಘಟನೆಯಲ್ಲಿ ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಮತ್ತು ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸಾನ್ವಿ ಬಾಬು ಕೊಕರೆ (5), ವಿನಯ್ ಲಕ್ಕು ಕೊಕರೆ (5), ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಗೆ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮರ ಕುಸಿದ ರಭಸಕ್ಕೆ ವಿದ್ಯುತ್ ಕಂಬಗಳು ತುಂಡಾಗಿವೆ. ಸುದ್ದಿ ತಿಳಿದ ಕೂಡಲೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಲೇಖನವನ್ನು ಹಂಚಿಕೊಳ್ಳಿ