ಉಡುಪಿ, ಜುಲೈ 31, 2025: 18 ವರ್ಷಕ್ಕೆ ಮತದಾನದ ಹಕ್ಕನ್ನು ಪಡೆಯುವ ಯುವ ಜನತೆ ಜೊತೆಗೆ ರಕ್ತದಾನದ ಹಕ್ಕನ್ನೂ ಪಡೆಯುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯುವಕರು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಹೇಳಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಸಂಸ್ಥೆಯಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ರಕ್ತಕ್ಕೆ ಜಾತಿ, ಮತ, ಧರ್ಮದ ಭೇದವಿಲ್ಲ. ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾದ ರಕ್ತವು ಅಗತ್ಯವಿರುವ ಯಾವುದೇ ರೋಗಿಯ ಜೀವವನ್ನು ಉಳಿಸುತ್ತದೆ. ರಕ್ತವನ್ನು ಕೇವಲ ವರ್ಗೀಕರಣದ ಆಧಾರದಲ್ಲಿ ಗುರುತಿಸಲಾಗುತ್ತದೆ, ಅದು ಯಾರದ್ದು ಎಂಬುದು ಯಾರಿಗೂ ತಿಳಿಯದು,” ಎಂದು ಡಾ. ವೀಣಾ ಕುಮಾರಿ ತಿಳಿಸಿದರು.

ಸನ್ಮಾನ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ, ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಮತ್ತು ಉಡುಪಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿದ ದಿಶಾನ್ ಪೂಜಾರಿ, ಶ್ರೀನಿವಾಸ್ ಪ್ರಸಾದ್ ಮಯ್ಯ, ಶಾಂತರಾಮ್ ಮೊಗವೀರ, ಝಾಕೀರ್ ಹುಸೇನ್, ವಿನುತಾ ಕಿರಣ್, ಜಯರಾಜ್ ಸಾಲಿಯಾನ್, ನಿತ್ಯಾನಂದ ಅಮೀನ್, ಚೇತನ್ ಶಂಕರಪುರ, ಅಬ್ದುಲ್ ಹಮೀದ್ ಉಚ್ಚಿಲ, ಮತ್ತು ಗುರುಚರಣ್ ಗಂಗೊಳ್ಳಿ ಇವರನ್ನು ಮಲಬಾರ್ ಗೋಲ್ಡ್ ವತಿಯಿಂದ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ವಿನುತಾ ಕಿರಣ್, ಶ್ರೀನಿವಾಸ್ ಪ್ರಸಾದ್ ಮಯ್ಯ, ಮತ್ತು ಚೇತನ್ ಶಂಕರಪುರ ರಕ್ತದಾನದ ಮಹತ್ವದ ಕುರಿತು ಮಾತನಾಡಿ, ಇತರರೂ ರಕ್ತದಾನದಲ್ಲಿ ಭಾಗವಹಿಸಿ ಜೀವಗಳನ್ನು ಉಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
118 ಯುನಿಟ್ ರಕ್ತ ಸಂಗ್ರಹ:
ಈ ಶಿಬಿರದಲ್ಲಿ ಒಂದೇ ದಿನದಲ್ಲಿ 118 ಯುನಿಟ್ ರಕ್ತ ಸಂಗ್ರಹವಾಯಿತು, ಇದನ್ನು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಕಳೆದ ವರ್ಷದ ರಕ್ತದಾನ ಶಿಬಿರದಲ್ಲಿ 88 ಯುನಿಟ್ ರಕ್ತ ಸಂಗ್ರಹವಾಗಿತ್ತು.
ಸಾಮಾಜಿಕ ಕಾರ್ಯಕ್ರಮಗಳಿಗೆ ಮಲಬಾರ್‌ನ ಕೊಡುಗೆ:
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯಸ್ಥ ಹಫೀಝ್ ರೆಹಮಾನ್, ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಂಸ್ಥೆಯ ಆದಾಯದ 5% ರಷ್ಟನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು. ಟ್ರಸ್ಟ್ ಆರಂಭವಾದಾಗಿನಿಂದ ದೇಶಾದ್ಯಂತ 282 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತವನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ. ಇದರಲ್ಲಿ 17 ರಾಜ್ಯಗಳ 95,000ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ 60 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್‌ನ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ, ಎ.ಕೆ. ಗುರುರಾಜ್, ಮಾರ್ಕೆಟಿಂಗ್ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದನೆ ಸಲ್ಲಿಸಿದರು.