ಬೈಂದೂರು, ಸೆಪ್ಟೆಂಬರ್ 18, 2025: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದನ್ನು ವಿರೋಧಿಸಿ, ಈ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘ ಮತ್ತು ಗ್ರಾಮಸ್ಥರು ಸೆಪ್ಟೆಂಬರ್ 19ರ ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಐದು ವರ್ಷಗಳ ಹಿಂದೆ ಸ್ಥಳೀಯರು ಮತ್ತು ವಿವಿಧ ಪಕ್ಷಗಳೊಂದಿಗೆ ಚರ್ಚಿಸದೆ ಅಧಿಕಾರಿಗಳು ಪಟ್ಟಣ ಪಂಚಾಯತ್ ರಚಿಸಿದ್ದಾರೆ. ಇದುವರೆಗೆ ಚುನಾವಣೆ ನಡೆದಿಲ್ಲ, ಆದರೆ 20 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಪಟ್ಟಣ ಪಂಚಾಯತ್‌ನ 54 ಕಿ.ಮೀ. ವ್ಯಾಪ್ತಿಯಲ್ಲಿ ಶೇ.47ರಷ್ಟು ದಟ್ಟ ಕಾಡು ಮತ್ತು ಗ್ರಾಮೀಣ ಭಾಗವಿದ್ದು, ಇದರಿಂದ ಜನರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ” ಎಂದು ಆರೋಪಿಸಿದರು.
“ಗ್ರಾಮೀಣ ಭಾಗಗಳನ್ನು ಕೈಬಿಟ್ಟು ಗ್ರಾಮ ಪಂಚಾಯತ್‌ಗಳಾಗಿ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. 11 ವಾರ್ಡ್‌ಗಳ ಹೊಸ ಬೈಂದೂರು ಪಟ್ಟಣ ಪಂಚಾಯತ್ ಪ್ರಸ್ತಾಪವನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದನ್ನು ಜಾರಿಗೊಳಿಸಬೇಕು ಎಂದು ಕಳೆದ ಶುಕ್ರವಾರ ಬೈಂದೂರಿನ ತಾಲೂಕು ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ್ತೊಂದು ಪ್ರತಿಭಟನೆ ನಡೆಸಲಿದ್ದೇವೆ” ಎಂದು ದೀಪಕ್ ಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ಸುತ್ತಮುತ್ತ 23 ಕಿ.ಮೀ. ವ್ಯಾಪ್ತಿಯ ಹತ್ತಾರು ಕುಗ್ರಾಮಗಳಿದ್ದು, ಕೃಷಿಯೇ ಜನರ ಜೀವನಾಧಾರವಾಗಿದೆ. “ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಗಳನ್ನು ಪಟ್ಟಣ ಪಂಚಾಯತ್‌ಗೆ ಸೇರಿಸಿರುವುದರಿಂದ ರೈತರಿಗೆ ಮೂಲ ಸೌಕರ್ಯ, ಅಕ್ರಮ-ಸಕ್ರಮ, ಕೃಷಿ ಸೌಲಭ್ಯಗಳು ದೊರಕುತ್ತಿಲ್ಲ. ಸಣ್ಣ ಕೆಲಸಕ್ಕೂ ಉಡುಪಿಗೆ ಅಲೆಯಬೇಕಾಗಿದೆ. ಜಿಲ್ಲಾಡಳಿತ ಇನ್ನೂ ಸ್ಪಂದಿಸಿಲ್ಲ” ಎಂದು ಶೆಟ್ಟಿ ಆಕ್ಷೇಪಿಸಿದರು.