ಕಾಪು, ಆಗಸ್ಟ್ 17, 2025: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಕಾಪು ಸೆಂಟರ್‌ನ ವತಿಯಿಂದ ಕೆ. ಒನ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿತ ಅಭಿನಂದನಾ ಸಮಾರಂಭದಲ್ಲಿ ಜ್ಞಾನ ಸಂಪಾದನೆಯ ಮಹತ್ವದ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮ ಫರಾನ ಬೇಗಮ್ ಅವರ ಕುರ್‌ಆನ್ ಪಠಣದೊಂದಿಗೆ ಆರಂಭವಾಯಿತು.
ಆಯಿಷಾ ಮಸ್ಜಿದ್ ನೆಜಾರ್‌ನ ಧರ್ಮಗುರು ಮೌಲಾನ ಆದಿಲ್ ನದ್ವಿ ಮಾತನಾಡಿ, ಸಂಪತ್ತಿನಿಂದ ಏನೂ ಸಾಧಿಸಲಾಗದು, ಆದರೆ ವಿದ್ಯೆಯಿಂದ ಜ್ಞಾನ ಗಳಿಸಬಹುದು. ಕುರ್‌ಆನ್‌ನ ಮೊದಲ ವಾಕ್ಯವೇ ಜ್ಞಾನ ಸಂಪಾದನೆಯ ಕುರಿತಾಗಿದೆ. ಲೌಕಿಕ ಮತ್ತು ಧಾರ್ಮಿಕ ಜ್ಞಾನವನ್ನು ಸಮಾನವಾಗಿ ಗಳಿಸಬೇಕು ಎಂದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಸದಸ್ಯೆ ರೇಷ್ಮಾ ಬೈಲೂರು, ಮನುಷ್ಯನ ಜೀವನದ ಉದ್ದೇಶ, ಇಹಲೋಕದ ಕರ್ತವ್ಯ, ಮತ್ತು ಮರಣಾನಂತರದ ಬದುಕಿಗೆ ತಯಾರಿಯ ಬಗ್ಗೆ ಅಧ್ಯಯನ ಮಾಡಬೇಕು. ಗಳಿಸಿದ ಜ್ಞಾನವನ್ನು ಸಮಾಜಕ್ಕೆ ಹಂಚಿಕೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ, ಜಮಾಅತೆ ಇಸ್ಲಾಮಿ ಹಿಂದ್ ಉತ್ತಮ ಸಮಾಜ ನಿರ್ಮಾಣ, ಕೆಡುಕನ್ನು ತೊಡೆದು ಒಳಿತನ್ನು ಸ್ಥಾಪಿಸುವ, ಯುವಕರಿಗೆ ನೈತಿಕ ಮಾರ್ಗದರ್ಶನ, ಮತ್ತು ಶಾಂತಿ-ಪ್ರೀತಿಯನ್ನು ಕಾಪಾಡುವ ಕೆಲಸ ಮಾಡುತ್ತಿದೆ. ಈ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

ಮುಹಮ್ಮದ್ ಶರೀಫ್ ಶೇಕ್ ಅತಿಥಿಗಳನ್ನು ಸ್ವಾಗತಿಸಿದರು. ಬಿ.ಐ.ಇ. ಸಂಚಾಲಕಿ ಶೇಹೇನಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮೆಹರೂಫ ಕಾರ್ಯಕ್ರಮವನ್ನು ನಿರೂಪಿಸಿದರು. ಸಯ್ಯದ್ ಮುಸ್ತಖೀಮ್ ಧನ್ಯವಾದ ಸಲ್ಲಿಸಿದರು.
ಜಾಕೀರ್ ಹುಸೈನ್, ಆಸೀಫ್ ಜಿ. ಡಿ., ಮತ್ತು ಅಷ್ಫಾಕ್ ಅಹಮದ್ ಮುಜಾವರ್ ಅವರು ಬಿ.ಐ.ಇ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ 80%ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್.ಐ.ಓ. ಮತ್ತು ಜಿ.ಐ.ಓ. ವರ್ತುಲದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿ.ಐ.ಓ. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.