ಕಾಪು, ಆಗಸ್ಟ್ 23, 2025: ಕಾಪು ಸಮೀಪ ಮೂಳೂರಿನ ಹಳ್ಳಿಘರ್ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡೆದ ಭೀಕರ ಕಾರು ಅಪಘಾತದಲ್ಲಿ ಖ್ಯಾತ ಯುವ ಡಿಜೆ ಮತ್ತು ಛಾಯಾಗ್ರಾಹಕ, ನವವಿವಾಹಿತ ಮರ್ವಿನ್ ಮೆಂಡೋನ್ಸಾ (35) ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಅಂಬಲಪಾಡಿಯ ಪ್ರಜ್ವಲ್ ಸುವರ್ಣ (ವಿಡಿಯೋ ಎಡಿಟರ್), ಕಾರ್ಕಳದ ಪ್ರಸಾದ್, ಮತ್ತು ವಿಘ್ನೇಶ್ ಎಂದು ಗುರುತಿಸಲಾಗಿದೆ. ಇವರು ಉಡುಪಿಯಿಂದ ಮಂಗಳೂರಿಗೆ ಕಾರಿನಲ್ಲಿ (KA-20-N-5248) ಪ್ರಯಾಣಿಸುತ್ತಿದ್ದಾಗ, ನಾಯಿಯೊಂದಕ್ಕೆ ಡಿಕ್ಕಿಯಾಗದಂತೆ ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ.
ತಕ್ಷಣ ಮಾಹಿತಿ ತಿಳಿದು ಆಗಮಿಸಿದ ಉಚ್ಚಿಲ ಮತ್ತು ಮೂಳೂರಿನ ಎಸ್‌ಡಿಪಿಐ ಆಂಬುಲೆನ್ಸ್ ಚಾಲಕರಾದ ಕೆ.ಎಂ. ಸಿರಾಜ್, ಹಮೀದ್ ಉಚ್ಚಿಲ, ಜಲಾಲುದ್ದೀನ್, ಆನ್ವರ್, ಮತ್ತು ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ ಸಹಕಾರದೊಂದಿಗೆ ಗಾಯಾಳುಗಳನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಯಿತು. ಗಾಯಾಳುಗಳಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮರ್ವಿನ್ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಗಾಯಗಳ ತೀವ್ರತೆಯಿಂದ ಮೃತಪಟ್ಟಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಮರ್ವಿನ್ ಗುರುವಾರ ತಮ್ಮ ಹೊಸ ಹಾಡನ್ನು ಎಪಿಡಿ ಮ್ಯೂಸಿಕ್‌ಗಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು, ಇದನ್ನು ಅವರು ಸ್ವತಃ ನಿರ್ಮಿಸಿ ಚಿತ್ರೀಕರಣ ಮಾಡಿದ್ದರು. ಕೊಂಕಣಿ ಮತ್ತು ತುಳು ಚಲನಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ತಮ್ಮ ಸೃಜನಶೀಲ ಪ್ರತಿಭೆಯಿಂದ ಗುರುತಿಸಿಕೊಂಡಿದ್ದರು.