ಬೈಂದೂರು, ಆಗಸ್ಟ್ 17, 2025: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಘಟಕದ ವತಿಯಿಂದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಅನುಕೂಲಕ್ಕಾಗಿ ಕುರ್ಚಿಗಳು ಮತ್ತು ಸ್ಟ್ರಕ್ಚರ್ ಟ್ರೋಲಿಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ಸಿ. ಸೌಕೂರ್, “ನಮ್ಮ ಆಸ್ಪತ್ರೆಗೆ ದಿನನಿತ್ಯ ಸುತ್ತಮುತ್ತಲಿನ ಗ್ರಾಮಗಳಿಂದ ಹಲವಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ವೈದ್ಯಕೀಯ ಸಲಕರಣೆಗಳ ಕೊರತೆ ಇದೆ. ದಾನಿಗಳ ಸಹಕಾರದಿಂದ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಬೈಂದೂರು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದ್ದರೂ, ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,” ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, “ಈ ಆಸ್ಪತ್ರೆಗೆ ಎಲ್ಲಾ ಜಾತಿ-ಸಮುದಾಯದ ರೋಗಿಗಳು ಬರುತ್ತಾರೆ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಾರೆ. ಖಿದ್ಮಾ ಫೌಂಡೇಶನ್‌ನ ಈ ದೇಣಿಗೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ,” ಎಂದು ಪ್ರಶಂಸಿಸಿದರು.

ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೊಬಿ ಪಿ.ಸಿ. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಫಯಾಜ್ ಅಲಿ ಬೈಂದೂರು, ಖಿದ್ಮಾ ಫೌಂಡೇಶನ್ ಉಪಾಧ್ಯಕ್ಷ ಮುಹಮ್ಮದ್ ಹಾರಿಸ್ ಗೋಳಿಹೊಳೆ, ಫಾರ್ಮಸಿ ಅಧಿಕಾರಿ ಅಶ್ಫಾಕ್ ನಾಗೂರು, ಸದಸ್ಯರಾದ ಬೇದ್ರೆ ಇಬ್ರಾಹಿಂ ಕುಂದಾಪುರ, ಅಬ್ದುಲ್ ರಹ್ಮಾನ್ ಶೀರೂರು, ರಿಜ್ವಾನ್ ನಾಗೂರು, ಅಸ್ಲಮ್ ತಲ್ಲೂರು, ಇರ್ಫಾನ್ ನಾಗೂರು, ಹಸನ್ ಶಬ್ಬರ್ ಶೀರೂರು, ಜಲಾಲ್ ಶೇಖ್ ಕಂಡ್ಲೂರು, ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಖಿದ್ಮಾ ಫೌಂಡೇಶನ್ ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ಭಾಷಣ ಮಾಡಿದರು, ಮತ್ತು ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.