ಕುಂದಾಪುರ, ಆಗಸ್ಟ್ 18, 2025: ಕುಂದಾಪುರ ತಾಲೂಕಿನ ಹಾಲಾಡಿ-ಬಿದ್ಕಲ್ ಕಟ್ಟೆ ಸಂಪರ್ಕಿಸುವ ರಾಜ್ಯ ರಸ್ತೆಯ ಹಾಲಾಡಿ ಬಳಿಯ ಬಜಾಜ್ ಮೋಟಾರ್ ಸರ್ವಿಸ್ ಎದುರು ಮಾರುತಿ ಎಸ್ ಕ್ರಾಸ್ ಕಾರು ಮತ್ತು ಬುಲೆರೋ ಪಿಕಪ್ ಗೂಡ್ಸ್ ವಾಹನದ ನಡುವೆ ಭೀಕರ ಢಿಕ್ಕಿಯಾಗಿದೆ. ಈ ಘಟನೆಯಲ್ಲಿ ಬುಲೆರೋ ವಾಹನದ ಹಿಂಭಾಗದಲ್ಲಿ ನಿಂತಿದ್ದ ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಾರುತಿ ಎಸ್ ಕ್ರಾಸ್ ಕಾರು ಶಿವಮೊಗ್ಗ ಜಿಲ್ಲೆಯ ಶಿರಾಳ ಕೊಪ್ಪ ಮೂಲದ ಯುವಕರು ಚಲಾಯಿಸುತ್ತಿದ್ದು, ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮರಳಿ ಶಿವಮೊಗ್ಗಕ್ಕೆ ತೆರಳುವಾಗ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕಾರು ಅತಿವೇಗದಲ್ಲಿ ಚಲಿಸುತ್ತಿದ್ದ ಕಾರಣ ಎದುರಿಗೆ ಬಂದ ಬುಲೆರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರಿನಲ್ಲಿದ್ದ ಮೂವರು ಯುವಕರು ಮದ್ಯಪಾನ ಸೇವಿಸಿ, ರಭಸವಾಗಿ ಕಾರು ಚಲಾಯಿಸಿದ್ದಾರೆ ಎಂಬ ಆರೋಪವಿದೆ. ಈ ರಭಸದ ಡಿಕ್ಕಿಯಿಂದ ಬುಲೆರೋ ವಾಹನದ ಹಿಂಭಾಗದಲ್ಲಿ ನಿಂತಿದ್ದ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಹಿರೇಗೌಡ್ರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.