ಮಣಿಪಾಲ, ಸೆಪ್ಟೆಂಬರ್ 20, 2025: ಮಣಿಪಾಲದ ಪ್ರತಿಷ್ಠಿತ ಕಾಲೇಜೊಂದರ ತರಗತಿಯಲ್ಲಿ ಸಹಪಾಠಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕ್ರಂ ಸಿಂಗ್, ವೀರ್ ರಾಜವೀರ್ ಸಿಂಗ್, ಮತ್ತು ಶಾಹ್ ಕ್ರಿಶ್ ಮಾಲಾವ್ ಎಂದು ಗುರುತಿಸಲಾಗಿದೆ.
ಮಣಿಪಾಲದ ಕಾಲೇಜಿನ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಾದ ರಾಜ್ ಗಿರೀಶ್ ಸುವರ್ಣ ಮತ್ತು ಸಾತ್ವಿಕ್ ಭಂಡಾರಿ ಅವರಿಗೆ ಸೆಪ್ಟೆಂಬರ್ 18ರ ಬೆಳಿಗ್ಗೆ ತರಗತಿಯಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಮಾರಾಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ತನಿಖೆಯಲ್ಲಿ ಆರೋಪಿಗಳು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.