ಉಡುಪಿ, ಸೆಪ್ಟೆಂಬರ್ 20, 2025: ಮಣಿಪಾಲದ ರಾಯಲ್ ಎಂಬೆಸಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಾದ ಆರ್ಯನ್ ಸಿ. ತಾದಾನಿ ಮತ್ತು ಆರ್ಯನ್ ಚಗಪ್ಪ ಅವರು ಮಣಿಪಾಲದ ಪ್ರತಿಷ್ಟಿತ ಕಾಲೇಜಿನ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಾಗಿದ್ದು, ಮಾದಕ ವಸ್ತುಗಳನ್ನು ಸಹವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಗುಪ್ತ ಮಾಹಿತಿಯ ಆಧಾರದ ಮೇಲೆ, ಫ್ಲ್ಯಾಟ್ ನಂ. C-1702ರಲ್ಲಿ ಗಾಂಜಾ ಮಾರಾಟ ನಡೆಯುತ್ತಿದ್ದ ಬಗ್ಗೆ ತಿಳಿದುಕೊಂಡ ಪೊಲೀಸ್ ತಂಡವು ಧಾಳಿ ನಡೆಸಿ ಆರ್ಯನ್ ಸಿ. ತಾದಾನಿಯನ್ನು ವಶಕ್ಕೆ ಪಡೆಯಿತು. ಆತನ ಬಳಿಯಿಂದ 2,105 ಗ್ರಾಂ ಗಾಂಜಾ (ಮೌಲ್ಯ: 60,000 ರೂ.), ಹುಕ್ಕಾ, ಡಿಜಿಟಲ್ ಸ್ಕೇಲ್, ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಆರ್ಯನ್ ಚಗಪ್ಪನನ್ನು ಮಂಗಳೂರಿನಲ್ಲಿ ಬಂಧಿಸಿ, ಅವನ ಸ್ಕೂಟಿ ಪರಿಶೀಲಿಸಿದಾಗ 627 ಗ್ರಾಂ ಗಾಂಜಾ (ಮೌಲ್ಯ: 20,000 ರೂ.) ಪತ್ತೆಯಾಗಿದ್ದು, ಅದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಾದಕ ವಸ್ತುಗಳ ಸೇವನೆಯ ವ್ಯಸನಿಗಳಾಗಿದ್ದು, ಕಾಲೇಜು ಆವರಣದಲ್ಲಿ ಸಹವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.