ಮಣಿಪಾಲ, ಸೆಪ್ಟೆಂಬರ್ 15, 2025: ಉಡುಪಿ ಜಿಲ್ಲೆಯ ಮಣಿಪಾಲದ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಅಕ್ರಮವಾಗಿ ಮಾದಕ ವಸ್ತು (MDMA) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 6.61 ಗ್ರಾಂ MDMA, ಎರಡು ಮೊಬೈಲ್‌ಗಳು, ಮತ್ತು ಒಂದು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಸಿಬ್ಬಂದಿಯ ತಂಡವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 7:30ರ ಸುಮಾರಿಗೆ ಪಡೆದ ಗುಪ್ತ ಮಾಹಿತಿಯ ಆಧಾರದ ಮೇಲೆ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿಯ ಸಾರ್ವಜನಿಕ ಸ್ಥಳಕ್ಕೆ ತೆರಳಿತು. ಅಲ್ಲಿ KA20-HF-8927 ನಂಬರ್‌ನ ಸ್ಕೂಟಿಯ ಬಳಿ ಆರೋಪಿಯೊಬ್ಬ ಇರುವುದನ್ನು ಖಚಿತಪಡಿಸಿಕೊಂಡು, ಬೆಳಗ್ಗೆ 9:20ಕ್ಕೆ ದಾಳಿ ನಡೆಸಿತು. ಈ ವೇಳೆ ಆರೋಪಿ ಮಹಮ್ಮದ್ ಅರ್ಫಾನ್ (26) ವಾಸ: ವಿನಯ ನಗರ, ಬೆಳಪು, ಕಾಪು ತಾಲೂಕು, ಉಡುಪಿ ಜಿಲ್ಲೆಯನ್ನು ವಶಕ್ಕೆ ಪಡೆಯಲಾಯಿತು.
ದಾಳಿಯ ಸಂದರ್ಭದಲ್ಲಿ ಸ್ಕೂಟಿಯ ಡ್ಯಾಶ್‌ಬೋರ್ಡ್‌ನಲ್ಲಿ ಎರಡು ಮೊಬೈಲ್‌ಗಳು ಮತ್ತು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಡಬ್ಬಿಯೊಳಗೆ ಏರ್ ಜಿಪ್ ಪ್ಲಾಸ್ಟಿಕ್ ಕವರ್‌ನಲ್ಲಿ 6.61 ಗ್ರಾಂ MDMA ಮಾದಕ ವಸ್ತು ಪತ್ತೆಯಾಯಿತು. ವಶಪಡಿಸಿಕೊಂಡ MDMAನ ಅಂದಾಜು ಮೌಲ್ಯ ಸುಮಾರು 13,000 ರೂಪಾಯಿಗಳು ಮತ್ತು ಎರಡು ಮೊಬೈಲ್‌ಗಳ ಒಟ್ಟು ಮೌಲ್ಯ ಸುಮಾರು 60,000 ರೂಪಾಯಿಗಳಾಗಿದೆ. ಆರೋಪಿಯು ಸ್ವಂತ ಲಾಭಕ್ಕಾಗಿ MDMA ಮಾರಾಟ ಮಾಡುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 165/2025ರಡಿಯಲ್ಲಿ ಕಲಂ 8(c), 20(B), 22(B) NDPS ಆಕ್ಟ್‌ನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.