ಶಿವಮೊಗ್ಗ, ಸೆಪ್ಟೆಂಬರ್ 17, 2025: ತೀವ್ರ ಜ್ವರದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಸಾಗಿಸಿರುವ ಘಟನೆ ಬುಧವಾರ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಹುಂಚ ಹೋಬಳಿಯ ಶಂಕರಹಳ್ಳಿ ಗ್ರಾಮದ ಶ್ರೇಯಾಂಕ್ (21) ಎಂಬ ಯುವಕ ತೀವ್ರ ಜ್ವರದಿಂದ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದಾನೆ. ಮಂಗಳವಾರ ಯುವಕನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಪಾಸಣೆಯಲ್ಲಿ ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿರುವುದು ದೃಢಪಟ್ಟಿದೆ. ವೈದ್ಯರು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸಲಹೆ ನೀಡಿದ್ದಾರೆ.
ವೈದ್ಯರ ಸಲಹೆಯಂತೆ, ಪೋಷಕರು ಯುವಕನನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಸಾಗಿಸಿದರು. ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರ ನೇತೃತ್ವದಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಒದಗಿಸಿದರು.