ಶಿರಸಿ, ಸೆಪ್ಟೆಂಬರ್ 17, 2025: ತಾಲೂಕಿನ ಹೆಮ್ಮೆಯ ಪುತ್ರಿ ಡಾ. ರಶ್ಮಿ ಹೆಗಡೆ ಅವರು ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಆಂಧ್ರಪ್ರದೇಶದ ಸಿಕಂದರಾಬಾದ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸೇವೆ ಸಲ್ಲಿಸಲಿರುವ ಇವರು, ದೇಶಕ್ಕಾಗಿ ಕಾಯುವ ಸೈನಿಕರು ಮತ್ತು ಅವರ ಕುಟುಂಬಗಳಿಗೆ ವೈದ್ಯಕೀಯ ಸೇವೆ ಒದಗಿಸಲಿದ್ದಾರೆ.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದು, ಹುಬ್ಬಳ್ಳಿಯ ಕೆಎಂಸಿಯಿಂದ ಎಂಡಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಬೊಪ್ಪನಹಳ್ಳಿಯ ಶ್ರೀಮತಿ ರೋಹಿಣಿ ಮತ್ತು ಡಾ. ಲಕ್ಷ್ಮೀನಾರಾಯಣ ಹೆಗ್ಡೆ ಅವರ ಪುತ್ರಿಯಾಗಿರುವ ರಶ್ಮಿ, ಯುವ ವೈದ್ಯರಿಗೆ ಸ್ಫೂರ್ತಿಯಾಗಿದ್ದಾರೆ.
ಗೋಕಾಕದ ಕೆ.ಎಲ್.ಇ. ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರಶ್ಮಿ, ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ ಪೂರೈಸಿದ್ದರು. 2015ರ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದರು. ಈ ಸಾಧನೆಯಿಂದ ಶಿರಸಿ ತಾಲೂಕು ಹೆಮ್ಮೆಪಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ.