ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ, ಎಚ್ಚರಿಕೆ ; ಉಡುಪಿ ಜಿಲ್ಲಾ ಪೊಲೀಸ್

ಉಡುಪಿ ಜಿಲ್ಲಾ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ವಂಚಕರು ಡಿಜಿಟಲ್ ಅರೆಸ್ಟ್, ನಕಲಿ ಷೇರ್ ಮಾರ್ಕೆಟ್, ಆನ್‌ಲೈನ್ ಉದ್ಯೋಗ ಆಮಿಷ, ನಕಲಿ ಕಸ್ಟಮರ್ ಕೇರ್, ಲೋನ್ ಆಪ್‌ಗಳು, ಗಿಫ್ಟ್-ಲಾಟರಿ ವಂಚನೆ, ಮತ್ತು APK ಫೈಲ್‌ಗಳ ಮೂಲಕ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ, ಎಚ್ಚರಿಕೆ ; ಉಡುಪಿ ಜಿಲ್ಲಾ ಪೊಲೀಸ್

ಉಡುಪಿ, ಆಗಸ್ಟ್ 12, 2025: ಉಡುಪಿ ಜಿಲ್ಲಾ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ವಂಚಕರು ಡಿಜಿಟಲ್ ಅರೆಸ್ಟ್, ನಕಲಿ ಷೇರ್ ಮಾರ್ಕೆಟ್, ಆನ್‌ಲೈನ್ ಉದ್ಯೋಗ ಆಮಿಷ, ನಕಲಿ ಕಸ್ಟಮರ್ ಕೇರ್, ಲೋನ್ ಆಪ್‌ಗಳು, ಗಿಫ್ಟ್-ಲಾಟರಿ ವಂಚನೆ, ಮತ್ತು APK ಫೈಲ್‌ಗಳ ಮೂಲಕ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಅಪರಾಧಗಳ ವಿಧಾನಗಳು:

  1. ಡಿಜಿಟಲ್ ಅರೆಸ್ಟ್: ವಂಚಕರು ಸಿಬಿಐ, ಕಸ್ಟಮ್ಸ್ ಅಥವಾ ಪೊಲೀಸ್ ಅಧಿಕಾರಿಗಳೆಂದು ದೂರವಾಣಿ ಅಥವಾ ವೀಡಿಯೋ ಕಾಲ್ ಮೂಲಕ ಸಂಪರ್ಕಿಸಿ, ಏರ್‌ಪೋರ್ಟ್‌ನಲ್ಲಿ ನಿಮ್ಮ ಹೆಸರಿನಲ್ಲಿ ಕೊರಿಯರ್‌ನಲ್ಲಿ ಡ್ರಗ್ಸ್, ನಕಲಿ ಪಾಸ್‌ಪೋರ್ಟ್ ಅಥವಾ ಸಿಮ್ ಕಾರ್ಡ್ ಇದೆ ಎಂದು ಭಯಬೀತಗೊಳಿಸಿ, ಯುನಿಫಾರ್ಮ್‌ನಲ್ಲಿ ವೀಡಿಯೋ ಕಾಲ್ ಮಾಡಿ ಹಣ ಕೇಳುತ್ತಾರೆ. ನಿಜವಾದ ಪೊಲೀಸರು ಇಂತಹ ಕರೆಗಳ ಮೂಲಕ ತನಿಖೆ ಮಾಡುವುದಿಲ್ಲ.
  2. ನಕಲಿ ಷೇರ್ ಮಾರ್ಕೆಟ್ ಮತ್ತು ಟ್ರೇಡಿಂಗ್: RBI/SEBI ಮಾನ್ಯತೆ ಇಲ್ಲದ ನಕಲಿ ಷೇರ್ ಮಾರ್ಕೆಟ್ ಆಪ್‌ಗಳಲ್ಲಿ ಹೂಡಿಕೆಗೆ ಆಮಿಷ ಒಡ್ಡಲಾಗುತ್ತದೆ. ವಾಟ್ಸಾಪ್/ಟೆಲಿಗ್ರಾಂ ಗುಂಪುಗಳ ಮೂಲಕ ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಸಿ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಒತ್ತಾಯಿಸಿ ವಂಚಿಸಲಾಗುತ್ತದೆ.
  3. ಆನ್‌ಲೈನ್ ಉದ್ಯೋಗ ಆಮಿಷ: ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗದ ಆಸೆ ತೋರಿಸಿ, ಸಣ್ಣ ಟಾಸ್ಕ್‌ಗಳಿಗೆ ಕಡಿಮೆ ಹಣ ನೀಡಿ ನಂಬಿಕೆ ಗಳಿಸುತ್ತಾರೆ. ನಂತರ ದೊಡ್ಡ ಮೊತ್ತವನ್ನು ಹೂಡಿಕೆಗೆ ಒತ್ತಾಯಿಸಿ ಹಣ ಕದಿಯಲಾಗುತ್ತದೆ.
  4. ನಕಲಿ ಕಸ್ಟಮರ್ ಕೇರ್ ನಂಬರ್: ಗೂಗಲ್ ಪೇ, ಫೋನ್ ಪೇನಂತಹ ಆಪ್‌ಗಳಿಗೆ ಸಂಬಂಧಿಸಿದ ಸಮಸ್ಯೆಗೆ ಗೂಗಲ್‌ನಲ್ಲಿ ಕಂಡುಬರುವ ನಕಲಿ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದಾಗ, ವಂಚಕರು ಲಿಂಕ್, UPI ಪಿನ್ ಅಥವಾ ಸಂದೇಶ ಕಳುಹಿಸಲು ಹೇಳಿ ಹಣ ಕದಿಯುತ್ತಾರೆ. ನಿಜವಾದ ಕಸ್ಟಮರ್ ಕೇರ್ ಇಂತಹ ಲಿಂಕ್‌ಗಳನ್ನು ಕೇಳುವುದಿಲ್ಲ.
  5. ನಕಲಿ ಲೋನ್ ಆಪ್‌ಗಳು: ಕಡಿಮೆ ಬಡ್ಡಿಯಲ್ಲಿ ದೊಡ್ಡ ಸಾಲದ ಆಮಿಷ ಒಡ್ಡಿ, ಮುಂಗಡ ಹಣ ಪಾವತಿಗೆ ಒತ್ತಾಯಿಸಲಾಗುತ್ತದೆ. ಸಾಲ ನಿರಾಕರಿಸಿದರೆ, ಭಾವಚಿತ್ರಗಳನ್ನು ಅಶ್ಲೀಲವಾಗಿ ಬದಲಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ಈ ಆಪ್‌ಗಳಿಗೆ ಸರಕಾರಿ ಪರವಾನಗಿ ಇರುವುದಿಲ್ಲ.
  6. OLX ಆಪ್‌ನಲ್ಲಿ ವಂಚನೆ: ಭಾರತೀಯ ಸೈನಿಕರ ಐಡಿ ಕಾರ್ಡ್‌ಗಳನ್ನು ತೋರಿಸಿ, OLX, ಕ್ವಿಕರ್‌ನಂತಹ ಆಪ್‌ಗಳಲ್ಲಿ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಆಮಿಷ ಒಡ್ಡಲಾಗುತ್ತದೆ. ಮುಂಗಡ ಹಣ ಕೇಳಿ, ವಾಹನ ಗೊತ್ತಿಲ್ಲದ ಸ್ಥಳದಲ್ಲಿದೆ ಎಂದು ವಂಚಿಸಲಾಗುತ್ತದೆ. ಇಂತಹ ಜಾಹೀರಾತುಗಳು ನಕಲಿಯಾಗಿರುತ್ತವೆ.
  7. ಗಿಫ್ಟ್ ಮತ್ತು ಲಾಟರಿ ವಂಚನೆ: ಸಾಮಾಜಿಕ ಜಾಲತಾಣಗಳಲ್ಲಿ ಗಿಫ್ಟ್ ಅಥವಾ ಲಾಟರಿ ಗೆದ್ದಿರುವ ಆಸೆ ತೋರಿಸಿ, ಮುಂಗಡ ಹಣ ಕೇಳಲಾಗುತ್ತದೆ. ಇದು ವಂಚನೆಗೆ ಕಾರಣವಾಗುತ್ತದೆ.
  8. APK ಫೈಲ್ ವಂಚನೆ: ಪಿಎಂ ಕಿಸಾನ್, ಆರೋಗ್ಯ ಭಾಗ್ಯ, ವಾಹನ ಪರಿವಾಹನ, ಅಥವಾ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಹೆಸರಿನಲ್ಲಿ APK ಫೈಲ್‌ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ, ವಾಟ್ಸಾಪ್, ಟೆಲಿಗ್ರಾಂ, ಫ್ಲಿಪ್‌ಕಾರ್ಟ್‌ನಂತಹ ಆಪ್‌ಗಳನ್ನು ದುರ್ಬಳಕೆ ಮಾಡಿಕೊಂಡು ಮಾಹಿತಿ ಕದಿಯಲಾಗುತ್ತದೆ.
  9. ನಕಲಿ ಆನ್‌ಲೈನ್ ಗೇಮಿಂಗ್ ಆಪ್‌ಗಳು: ಚಲನಚಿತ್ರ ತಾರೆಯರ ಜಾಹೀರಾತುಗಳು, ಯೂಟ್ಯೂಬ್, ಟಿಕ್‌ಟಾಕ್‌ನಂತಹ ಮಾಧ್ಯಮಗಳ ಮೂಲಕ ಗೇಮಿಂಗ್ ಆಪ್‌ಗಳಲ್ಲಿ ತ್ವರಿತವಾಗಿ ಹಣ ಗಳಿಸುವ ಆಸೆ ತೋರಿಸಿ, ಹೂಡಿಕೆಗೆ ಒತ್ತಾಯಿಸಿ, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ ವಂಚಿಸಲಾಗುತ್ತದೆ.

ಸೈಬರ್ ವಂಚಕರು ವಂಚನೆಗೆ ಬಳಸುವ ಇತರ ಮಾರ್ಗಗಳು:

  1. ಅಪರಿಚಿತ ಲಿಂಕ್‌ಗಳಿಂದ ವಂಚನೆ: ಅಪರಿಚಿತರಿಂದ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ವೈಯಕ್ತಿಕ ಮಾಹಿತಿ ಕದ್ದು ಹಣ ವಂಚನೆ ಮಾಡಲಾಗುತ್ತದೆ.
  2. ನಕಲಿ ಜಾಹೀರಾತುಗಳು: ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ನಕಲಿ ಜಾಹೀರಾತುಗಳು ಆಕರ್ಷಕ ಆಫರ್‌ಗಳೊಂದಿಗೆ ಹಣ ಕದಿಯಲು ಬಳಸಲಾಗುತ್ತದೆ.
  3. ಪೋಸ್ಟ್/ಕೊರಿಯರ್ ಮೂಲಕ ಲಾಟರಿ: ಲಾಟರಿ, ನಗದು ಬಹುಮಾನ, ಅಥವಾ ಗಿಫ್ಟ್‌ಗಳನ್ನು ಕೊರಿಯರ್‌ನಲ್ಲಿ ಗೆದ್ದಿರುವುದಾಗಿ ನಂಬಿಸಿ, ಮುಂಗಡ ಹಣ ಕೇಳಿ ವಂಚಿಸಲಾಗುತ್ತದೆ.
  4. ಗೂಗಲ್‌ನಲ್ಲಿ ಕಂಡುಬರುವ ಸಹಾಯವಾಣಿ: ಗೂಗಲ್‌ನಲ್ಲಿ ಕಂಡುಬರುವ ಸಹಾಯವಾಣಿ ಸಂಖ್ಯೆಗಳು ಅಥವಾ ಇ-ಮೇಲ್‌ಗಳ ಮೂಲಕ ವಂಚಕರು ಮಾಹಿತಿ ಕದಿಯುತ್ತಾರೆ.
  5. ಮೊಬೈಲ್/ಲ್ಯಾಪ್‌ಟಾಪ್‌ನ ದುರ್ಬಳಕೆ: ಅಪರಿಚಿತರಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೀಡುವುದು, ಅಥವಾ ರೈಲ್ವೆ/ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಮಾಡುವಾಗ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ.
  6. KYC ನವೀಕರಣ ಆಮಿಷ: ಬ್ಯಾಂಕ್‌ನಿಂದ KYC ನವೀಕರಣಕ್ಕೆಂದು ಬರುವ ಸಂದೇಶಗಳು ಅಥವಾ ಕರೆಗಳ ಮೂಲಕ ATM/ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕೇಳಿ ವಂಚಿಸಲಾಗುತ್ತದೆ.
  7. ಎಲೆಕ್ಟ್ರಿಕ್ ಬಿಲ್ ವಂಚನೆ: ಎಲೆಕ್ಟ್ರಿಕ್ ಬಿಲ್ ಪಾವತಿಗೆಂದು ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಸಿ, ಬ್ಯಾಂಕ್ ಮಾಹಿತಿಯನ್ನು ಕದಿಯಲಾಗುತ್ತದೆ.
  8. ಆಕರ್ಷಕ ಸಂದೇಶಗಳು: ಅಪರಿಚಿತರಿಂದ ಬರುವ ಆಕರ್ಷಕ, ಆಮಿಷದ ಸಂದೇಶಗಳಿಗೆ ಒಳಗಾಗಿ ಹಣ ಕಳೆದುಕೊಳ್ಳಲಾಗುತ್ತದೆ.
  9. ಸಾಮಾಜಿಕ ಜಾಲತಾಣ ಸ್ನೇಹ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿ, ಮಾಹಿತಿ ಕದಿಯಲಾಗುತ್ತದೆ.
  10. ATM/ಕ್ರೆಡಿಟ್ ಕಾರ್ಡ್ ವಂಚನೆ: ಬ್ಯಾಂಕ್ ಮ್ಯಾನೇಜರ್‌ನಿಂದ ಕರೆ ಬಂದಿದೆ ಎಂದು ATM/ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕೇಳಿ, ಕಾರ್ಡ್ ಬ್ಲಾಕ್, ರಿನೀವಲ್, ಅಥವಾ ಆಕ್ಟಿವೇಶನ್‌ಗೆಂದು ವಂಚಿಸಲಾಗುತ್ತದೆ.

ಪೊಲೀಸರ ಸಲಹೆ:

  • ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
  • ನಕಲಿ ಜಾಹೀರಾತುಗಳಿಗೆ ಮೋಸ ಹೋಗಬೇಡಿ.
  • ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿ.
  • ಸೈಬರ್ ವಂಚನೆ ಶಂಕೆಯಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ, https://cybercrime.gov.in ಗೆ ದೂರು ಸಲ್ಲಿಸಿ, ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ.
  • ಸೈಬರ್ ತುರ್ತು ಸಹಾಯವಾಣಿ: 1930, ಪೊಲೀಸ್ ತುರ್ತು ಸಹಾಯವಾಣಿ: 112.

ಈ ಲೇಖನವನ್ನು ಹಂಚಿಕೊಳ್ಳಿ