ಉಡುಪಿ, ಆಗಸ್ಟ್ 18, 2025: ಮಣಿಪಾಲದಲ್ಲಿ ವಿದ್ಯಾರ್ಥಿಗಳು ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಗುರಿಯಾಗಿಟ್ಟು ಗಾಂಜಾ ಮತ್ತು LSD ಡ್ರಗ್ಸ್ ಮಾರಾಟ ಮಾಡುತ್ತಿದ್ದ ಒಬ್ಬ ಸ್ಥಳೀಯ ಹಾಗೂ ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಳೆದ ಶನಿವಾರ ರಾತ್ರಿ, ಮಣಿಪಾಲ ಠಾಣಾ ಸರಹದ್ದಿನ ಹೆರ್ಗ ಗ್ರಾಮದ ಈಶ್ವರನಗರ ನರಸಿಂಗೆ ದೇವಸ್ಥಾನ ರಸ್ತೆಯ ಬಳಿಯ ಮಣಿಪಾಲ ಆಟೋ ಬಾರ್ ಕಟ್ಟಡದ ಮೊದಲನೇ ಮಹಡಿಯ ರೂಮ್ ನಂಬರ್ 03ನಲ್ಲಿ ದಾಳಿ ನಡೆಸಿತು. ಈ ದಾಳಿಯಲ್ಲಿ ಕೇರಳದ ತಿರುವನಂತಪುರಂ ನಿವಾಸಿ ಅಫ್ಝಿನ್ (ಹಿಂದಿನ MDMA ಮಾರಾಟ ಪ್ರಕರಣದ ಆರೋಪಿ) ಮತ್ತು ಉಡುಪಿಯ ಶಿವಳ್ಳಿ ಗ್ರಾಮದ ಶಿವನಿಧಿ ಆಚಾರ್ಯ (ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ) ಇವರನ್ನು ಬಂಧಿಸಲಾಯಿತು. ಆರೋಪಿಗಳಿಂದ 1.237 ಕೆ.ಜಿ. ಗಾಂಜಾ, 0.038 ಗ್ರಾಂ LSD ಸ್ಟ್ರಿಪ್, ಪ್ಲಾಸ್ಟಿಕ್ ಕವರ್‌ಗಳು, ಡಿಜಿಟಲ್ ಸ್ಕೇಲ್, ₹2,000 ನಗದು, ಮತ್ತು ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ತನಿಖೆಯನ್ನು ಮುಂದುವರಿಸಿದ ಮಣಿಪಾಲ ಪಿಎಸ್‌ಐ ಅಕ್ಷಯ ಕುಮಾರ್, ಕೇರಳದ ಕಾಸರಗೋಡು ನಿವಾಸಿ ಮನೀಷ್‌ನನ್ನು ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಸಫಯಾರ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 004ನಲ್ಲಿ ದಾಳಿ ನಡೆಸಿ ಬಂಧಿಸಿದರು. ಆರೋಪಿಯ ಮನೆಯಿಂದ 653 ಗ್ರಾಂ ಗಾಂಜಾ, ಎರಡು ಡಿಜಿಟಲ್ ಸ್ಕೇಲ್, ಒಂದು ಗಾಂಜಾ ಕ್ರಷರ್, ₹3,000 ನಗದು, ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಯಿತು. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಂಗ ಬಂಧನ ವಿಧಿಸಲಾಯಿತು.
ಪೊಲೀಸರು ಆರೋಪಿಗಳಿಗೆ ಗಾಂಜಾ ಪೂರೈಸಿದ ಮಿಥುನ್ ಎಂಬಾತನನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸಿದಾಗ, ಆತ ಬೆಂಗಳೂರಿನಿಂದ ಗಾಂಜಾ ಮತ್ತು LSD ತರಿಸಿ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿತು. ಗಾಂಜಾ ಸೇವನೆಯ ಶಂಕೆಯ ಮೇಲೆ ಆಜೀಶ್ (28, ಪಾಲಕ್ಕಾಡ್, ಕೇರಳ), ವಿಪಿನ್ (32, ಮಾತುರ್, ಕೇರಳ), ಬಿಪಿನ್ (24, ತ್ರಿಶೂರ್, ಕೇರಳ), ಮತ್ತು ಆಕಿಲ್ (26, ಮಲ್ಲಪಳ್ಳಿ, ಕೇರಳ) ಇವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಈ ನಾಲ್ವರು ಗಾಂಜಾ ಸೇವಿಸಿದ್ದು ದೃಢಪಟ್ಟಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಅಫ್ಝಿನ್ ಖಾಸಗಿ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಶಿವನಿಧಿ ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಮನೀಶ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಕೇರಳ ಮತ್ತು ಹೊರ ರಾಜ್ಯಗಳ ಕಾರ್ಮಿಕರಿಗೆ ಗಾಂಜಾ ಪೂರೈಸುತ್ತಿದ್ದ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಅವರ ಸೂಚನೆಯಂತೆ, ಮಣಿಪಾಲ ಪೊಲೀಸರು ಹೊರ ರಾಜ್ಯದ ವಿದ್ಯಾರ್ಥಿಗಳು ಮತ್ತು ಕೈಗಾರಿಕೆ ಕಾರ್ಮಿಕರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.